ಮಂಗಳೂರು, ಏ 25 (DaijiworldNews/SM): ಇನ್ನು ಮುಂದಕ್ಕೆ ಕೊರೊನಾದಿಂದ ಯಾರಾದರು ಮೃತಪಟ್ಟರೆ ನಮ್ಮ ಸ್ಮಶಾನಕ್ಕೆ ತನ್ನಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಯಾರಾದರು ಕೊರೊನಾದಿಂದ ಮೃತಪಟ್ಟಲ್ಲಿ ಅವರನ್ನು ಸುರತ್ಕಲ್ ನ ಕಾಟಿಪಳ್ಳ ಹಿಂದೂ ರುದ್ರಭೂಮಿಗೆ ತನ್ನಿ. ನಾವು ಅವರಿಗೆ ಶವ ಸಂಸ್ಕಾರ ನಡೆಸಲು ಅವಕಾಶ ಮಾಡಿಕೊಡುತ್ತೇವೆ ಎಂಬುವುದಾಗಿ ಹಿಂದೂ ರುದ್ರ ಭೂಮಿ ನವೀಕರಣ ಮತ್ತು ಅಭಿವೃದ್ಧಿ ಸಮಿತಿ ಕಾಟಿಪಳ್ಳ ಗಣೇಶ್ಪುರದವರು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರಿಗೆ ಪತ್ರಬರೆದಿದ್ದಾರೆ.
ಕಾಟಿಪಳ್ಳ ಗಣೇಶ್ಪುರದವರು ರುದ್ರ ಭೂಮಿ ಮಂಗಳೂರು ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅವಕಾಶ ನೀಡಲಾಗುವುದಾಗಿ ಸಮಿತಿ ತಿಳಿಸಿದೆ. ಅಲ್ಲದೆ ರುದ್ರಭೂಮಿಯಲ್ಲಿ ದಹನ ಕ್ರಿಯೆಗೆ ಬೇಕಾಗುವ ಸಾಮಾಗ್ರಿಗಳನ್ನು ತಾವೇ ಉಚಿತವಾಗಿ ನೀಡುತ್ತೇವೆ ಎಂಬುವುದಾಗಿಯೂ ಸಮಿತಿ ತಿಳಿಸಿದೆ. ಹಾಗಂತ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೆಂದು ಬಲಿಯಾಗಬಾರದು ಎಂಬುವುದಾಗಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಅವರು ಬರೆದಿದ್ದಾರೆ.
ಇನ್ನು ಗುರುವಾರದಂದು ರಾತ್ರಿ ಕೊರೊನಾ ಸೋಂಕಿಗೆ ಬಂಟ್ವಾಳ ಪೇಟೆಯ ಮಹಿಳೆ ಮೃತಪಟ್ಟಿದ್ದರು. ಅವರ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸಲು ಮಂಗಳೂರು ನಗರದ ಹಲವು ರುದ್ರಭೂಮಿಗಳಲ್ಲಿ ಅಳೆದಾಡಿ ಅವಕಾಶ ಸಿಕ್ಕಿರಲಿಲ್ಲ. ಪಚ್ಚನಾಡಿ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಸಲು ಸಾರ್ವಜನಿಕರು ವಿರೋಧಿಸುತ್ತಿದ್ದಂತೆ ಜನರ ಪರ ಶಾಸಕರು ನಿಂತರು. ಇನ್ನು ಮೂಡುಶೆಡ್ಡೆಯಲ್ಲೂ ಅದೇ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಬಂಟ್ವಾಳ ಸ್ಮಶಾನದಲ್ಲಿ ನಡೆಸಲು ನಿರ್ಧರಿಸಿದ ಸಂದರ್ಭ ಅಲ್ಲೂ ಕೂಡ ವಿರೋಧ ವ್ಯಕ್ತವಾಗಿತ್ತು. ಅಂತಿಮವಾಗಿ ಮಧ್ಯರಾತ್ರಿಯ ಸಮಯದಲ್ಲಿ ಬಿ.ಸಿ.ರೋಡು ಕೈಕುಂಜೆ ಸ್ಮಶಾಸನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ಜಿಲ್ಲಾಡಳಿತ ರಾತ್ರಿಯೆಲ್ಲಾ ಮೃತದೇಹವನ್ನು ಹೊತ್ತು ಅಲೆದಾಡಿತ್ತು ಎಂಬ ಆರೋಪಗಳು ಕೂಡ ವ್ಯಕ್ತವಾಗಿತ್ತು.
ಈ ಎಲ್ಲಾ ಘಟನೆಗಳು ಜಿಲ್ಲೆ, ಹೊರ ಜಿಲ್ಲೆಗಳಲ್ಲೂ ಪರ ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಸಾಕಷ್ಟು ಜನ, ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಕಾಟಿಪಳ್ಳ ಗಣೇಶ್ಪುರ ರುದ್ರಭೂಮಿ ಸಮಿತಿ ಅಂತ್ಯಸಂಸ್ಕಾರದ ಜವಾಬ್ದಾರಿ ವಹಿಸಿಕೊಂಡಿದ್ದು, ವಿರೋಧಿಸಿದ ಎಲ್ಲರಿಗೂ ಸೆಡ್ಡು ಹೊಡೆದಂತಾಗಿದೆ.