ಬೆಳ್ತಂಗಡಿ, ಏ 25 (DaijiworldNews/SM): ಕ್ವಾರಟೈನ್ಗೊಳಪಟ್ಟ ನರ್ಸ್ ಒಬ್ಬರಿಗೆ ಅಪಹಾಸ್ಯ ಹಾಗೂ ಅವಮಾನ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ಗೆ ಮುಂಜಾಗೃತೆ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಹೋಂ ಕ್ವಾರಂಟೈನ್ ನಲ್ಲಿದ್ದ ನರ್ಸ್ ಬಗ್ಗೆ ಸ್ಥಳೀಯರಿಗೆ ಮಾಹಿತಿ ಲಭ್ಯವಾಗಿದೆ. ಆದರೆ, ಸ್ಥಳೀಯ ನಿವಾಸಿಗಳು ಅವರ ಸೇವೆಯನ್ನು ಮರೆತು ಅವರನ್ನು ಅಪಹಾಸ್ಯ ನಡೆಸಲು ಆರಂಭಿಸಿದ್ದಾರೆ.
ಇದರಿಂದ ನೊಂದುಕೊಂಡ ದಾದಿ ತಮ್ಮ ತಾಲೂಕಿನ ಶಾಸಕ ಹರೀಶ್ ಪೂಂಜಾ ಅವರಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಈ ವಿಚಾರ ಶಾಸಕರನ್ನು ಕೂಡ ಕೆರಳಿಸುವಂತೆ ಮಾಡಿದೆ. ಬಳಿಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಇದೊಂದು ಅಮಾನವೀಯ ಘಟನೆ. ನಮ್ಮ ಆರೋಗ್ಯ ರಕ್ಷಣೆಗಾಗಿ ಹೋರಾಡುತ್ತಿರುವವರು ಸಿಬ್ಬಂದಿಗಳು ಕೊರೊನಾ ವಿರುದ್ಧ ಹೋರಾಡುವ ಸೈನಿಕರು. ಸೈನಿಕನಿಗೆ ಗುಂಡೇಟು ಬಿದ್ದರೆ ಅಪಹಾಸ್ಯ ಮಾಡುತ್ತೇವೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮೆಲ್ಲರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸೇವೆ ನೀಡುವ ದಾದಿಯರಿಗೆ ತಿಳಿಯದೆ ಸೋಂಕಿತರ ಸಂಪರ್ಕವಾಗಿರಬಹುದು. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಸಿಬ್ಬಂದಿಗಳಿಗೆ ಕ್ವಾರಂಟೈನ್ ವಿಧಿಸಲಾಗಿದೆ. ಆದರೆ, ಕೊರೊನಾ ವಿರುದ್ಧ ಹೋರಾಡುವವರನ್ನು ಹೀಯಾಳಿಸದಿರಿ. ಕೀಳುಮಟ್ಟದ ಮಾತುಗಳು ಯಾರಿಗೂ ಶೋಭೆ ತರಲಾರದು. ಇಂತಹ ಹೀನ ಕೆಲಸಗಳನ್ನು ದಯವಿಟ್ಟು ನಿಲ್ಲಿಸಿ ಎಂಬುವುದಾಗಿ ಅವರು ಮನವಿ ಮಾಡಿಕೊಂಡಿದ್ದಾರೆ.ಕೊರೊನಾ ಸೈನಿಕರಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಟ್ವೀಟ್ ಮಾಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಓರ್ವ ದಾದಿಯಾಗಿ ಅವರು ತಮ್ಮ ಜೀವದ ಹಂಗು ತೊರೆದು ಸೇವೆಯನ್ನು ಸಲ್ಲಿಸಿದ್ದಾರೆ. ಕೊರೊನಾ ನಿಯಂತ್ರಣವೇ ತಮ್ಮ ಜವಾಬ್ದಾರಿಯೆಂದು ದಿನ ರಾತ್ರಿ ಹೋರಾಡುವ ವೈದ್ಯರು ದಾದಿಯರನ್ನು ಎಲ್ಲರೂ ಗೌರವದಿಂದಲೇ ಕಾಣಬೇಕಾಗಿದೆ. ಆದರೆ, ಜನಸಾಮಾನ್ಯರು ಕೆಲವರು ತಮ್ಮ ಜವಾಬ್ದಾರಿಯನ್ನೇ ಮರೆತಂತೆ ತೋರುತ್ತದೆ. ತಮ್ಮ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸುವವರನ್ನು ಎಂದಿಗೂ ಹೀಯಾಳಿಸುವ ಕಾರ್ಯವನ್ನು ಯಾರೂ ಕೂಡ ಮಾಡಲೇ ಬಾರದು.