ವಿಟ್ಲ, ಏ 25 (DaijiworldNews/SM): ತೀವ್ರ ಹೊಟ್ಟೆನೋವು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕನ್ಯಾನ ಮೂಲದ ಯುವಕ ಶನಿವಾರ ಬೆಳಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಆದರೆ, ಯುವಕನ ಸಾವಿನ ಸುತ್ತ ಇದೀಗ ಅನುಮಾನ ಹುಟ್ಟಿಕೊಂಡಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಯುವಕ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು ಮೃತ ಯುವಕನ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಕೊರೊನಾ ನೆಗೆಟಿವ್ ವರದಿ ಲಭ್ಯವಾಗಿದೆ. ಇದರಿಂದಾಗಿ ಆ ಯುವಕ ಕೊರೊನಾದಿಂದ ಮೃತಪಟ್ಟಿಲ್ಲ ಎಂಬುವುದಾಗಿ ದೃಢಪಟ್ಟಿದೆ.
ಇನ್ನು ದೈಯ್ಜಿವರ್ಲ್ಡ್ ಗೆ ಯುವಕನ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ಮೃತ ಯುವಕನಿಗೆ ಹೊಟ್ಟೆನೋವು, ಉಬ್ಬಸದ ತೊಂದರೆ ಇತ್ತು. ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಮನೆಯವರ ಆರೋಪ ಮಾಡಿದ್ದಾರೆ. ಏಪ್ರಿಲ್ 22ರಂದು ಯುವಕನಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಏಪ್ರಿಲ್ 23ರಂದು ಗುರುವಾರ ಬೆಳಗ್ಗೆ ವಿಟ್ಲ ಆಸ್ಪತ್ರೆ ಕರೆದುಕೊಂಡು ಹೋಗಿದ್ದರು. ಆದರೆ ಬಂಟ್ವಾಳ ಆಸ್ಪತ್ರೆಯವರು ವೆನ್ಲಾಕ್ ಆಸ್ಪತ್ರೆಗೆ ಹೋಗುವಂತೆ ಸೂಚನೆ ನೀಡಿದ್ದರು. ಆಸ್ಪತ್ರೆಯ ಸಿಬ್ಬಂದಿಗಳೇ ಯುವಕನನ್ನು ವೆನ್ಲಾಕ್ಗೆ ದಾಖಲಿಸಿದ್ದಾರೆ. ಮನೆಯವರಿಗೆ ವೆನ್ಲಾಕ್ ಗೆ ಬರೋದಕ್ಕೆ ಅವಕಾಶ ನಿರಾಕರಣೆ ಮಾಡಿದ್ದಾರೆ. ಆದರೆ ಇಂದು ಯುವಕ ಮೃತಪಟ್ಟಿರುವ ವಿಚಾರ ತಿಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇನ್ನು ಆತನಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಹೊಟ್ಟೆ ನೋವಿಗೆ ಸ್ಕ್ಯಾನಿಂಗ್ ನಡೆಸಿ ಮದ್ದು ಯಾಕೆ ಕೊಟ್ಟಿಲ್ಲ? ಆಸ್ಪತ್ರೆಗೆ ಹೋದ ಸಂದರ್ಭದಲ್ಲೇ ಆತನಿಗೆ ಚಿಕಿತ್ಸೆ ನೀಡಿದ್ದಲ್ಲಿ ನಮ್ಮ ಮಗ ಸಾಯುತ್ತಿರಲ್ಲ ಎಂಬುವುದಾಗಿ ದೈಜಿವರ್ಲ್ಡ್ ವಾಹನಿ ಜತೆ ಮನೆಯವರ ಕಣ್ಣೀರು ಸುರಿಸಿ ಅಳಲು ತೋಡಿಕೊಂಡಿದ್ದಾರೆ. ನಮ್ಮ ಮಗ ಮನೆಗೆ ಆಧಾರಸ್ತಂಭವಾಗಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಮನೆ ನಿರ್ವಹಿಸುತ್ತಿದ್ದ ಎಂಬುವುದಾಗಿ ಅವರು ತಿಳಿಸಿದ್ದಾರೆ.