ಬಂಟ್ವಾಳ,ಸೆ.03: ಕುರಾನ್ ಬಗ್ಗೆ ಗೌರವ ಇದೆ ಹೀಗಾಗಿ ಪವಿತ್ರ ಧರ್ಮಗ್ರಂಥವನ್ನು ಮುಟ್ಟಲು ಹೋಗಿಲ್ಲವೆಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಶರತ್ ಮಡಿವಾಳ ಹತ್ಯೆಯ ಪ್ರಮುಖ ಆರೋಪಿ ಖಲಂಧರ್ ಶಾಫಿ ಮನೆಯಲ್ಲಿ ಸರ್ಚ್ ವಾರಂಟ್ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುವಾಗ ಕುರಾನ್ ಬಿಸಾಡಿ ಪವಿತ್ರತೆಗೆ ಧಕ್ಕೆ ತರಲಾಗಿದೆ ಎನ್ನುವ ಆರೋಪ ವ್ಯಕ್ತವಾದ ಹಿನ್ನಲೆಯಲ್ಲಿ ಎಸ್ಪಿ ಸ್ಪಷ್ಟನೆಯನ್ನು ನೀಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೂಡಾ ಹಲವಾರು ಮುಸ್ಲಿಂ ಸಿಬ್ಬಂದಿಗಳು ಇದ್ದಾರೆ. ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳ ಬಗ್ಗೆ ಎಲ್ಲರಿಗೂ ಗೌರವ ಇದೆ. ಹೀಗಾಗಿ ತನಿಖೆಯ ಹಾದಿ ತಪ್ಪಿಸುವ ನಿಟ್ಟಿನಲ್ಲಿ ಅಪಪ್ರಚಾರ ನಡೆಸುವವರ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಸುಧೀರ್ ಕುಮಾರ್ ರೆಡ್ಡಿ ನೀಡಿದ್ದಾರೆ. ಇನ್ನು ಶರತ್ ಹತ್ಯಾ ಪ್ರಕರಣದ ಪ್ರಮುಖ ಆರೋಪಿ ಖಲಂಧರ್ ಶಾಫಿ ಮನೆಯಲ್ಲಿ ಮಹತ್ವದ ದಾಖಲೆ ಪತ್ರಗಳು ಲಭ್ಯವಾಗಿದ್ದು, ಸಾಕ್ಷಾಧಾರಗಳನ್ನು ಮುಚ್ಚಿಹಾಕಲು ಯತ್ನಿಸುವವರ ವಿರುದ್ಧ ಸದ್ಯದಲ್ಲಿಯೇ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ಧಾರೆ.