ಮಂಗಳೂರು, ಎ.26 (Daijiworld News/MB) : ಕಿನ್ನಿಗೋಳಿಯ ಕನ್ಸೆಟ್ಟ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಖ್ಯಾತ ಪ್ರಸೂತಿ ತಜ್ಞೆ ಹಾಗೂ ಸ್ತ್ರೀ ರೋಗ ತಜ್ಞೆ ಡಾ| ಸಿಸ್ಟರ್ ಲಿಲಿಯಾನ್ ಸಿಕ್ವೇರಾ ಅವರು ಏಪ್ರಿಲ್ 25 ರ ಶನಿವಾರ ರಾತ್ರಿ 9 ಗಂಟೆಗೆ ನಿಧನರಾದರು.
ದಿವಂಗತ ಸೆಬಾಸ್ಟಿಯನ್ ಸಿಕ್ವೇರಾ ಮತ್ತು ದಿವಂಗತ ಮ್ಯಾಗ್ಡೆಲೀನ್ ಸಿಕ್ವೇರಾ ಅವರ ಪುತ್ರಿ ಲಿಲಿಯಾನ್ ಸಿಕ್ವೇರಾ ಅವರು ಬಾಲ್ಕುಂಜೆ ಮೂಲದವರಾಗಿದ್ದಾರೆ. ಡಾ. ಎಸ್.ಆರ್. ಲಿಲಿಯಾನ್ ಅವರು ಸಿಸ್ಟರ್ಸ್ ಆಫ್ ದಿ ಲಿಟಲ್ ಫ್ಲವರ್ ಆಫ್ ಬೆಥಾನಿಯಗೆ ಸೇರಿದವರಾಗಿದ್ದು ಕಿನ್ನಿಗೋಳಿಯ ಮೇರಿವಾಲ್ ಕಾನ್ವೆಂಟ್ನ ಸದಸ್ಯರಾಗಿದ್ದರು.
ಲಿಲಿಯಾನ್ ಅವರು ವೈದ್ಯರಾಗಿ ವೃತ್ತಿಪರ ಗಂಭೀರತೆಯ ಜೊತೆಗೆ ರೋಗಿಗಳೊಂದಿಗೆ ಒಬ್ಬ ಬೆಥನಿ ಭಗಿನಿಯ ಪ್ರೀತಿ ವಾತ್ಸಲ್ಯ ಮೈಗೂಡಿಸಿಕೊಂಡಿದ್ದು ಸಹಾನುಭೂತಿಯನ್ನು ಕೂಡಾ ಹೊಂದಿದ್ದರು.
ಕಿನ್ನಿಗೋಳಿಯ ಆಸುಪಾಸಿನ ಜನರಿಗೆ ಡಾ| ಸಿಸ್ಟರ್ ಲಿಲಿಯಾನ್ ಸಿಕ್ವೇರಾ ಸ್ಥಾಪನೆ ಮಾಡಿದ ಕನ್ಸೆಟ್ಟ ಆಸ್ಪತ್ರೆಯೇ ಆ ಸಂದರ್ಭದಲ್ಲಿ ಏಕೈಕ ಆಸ್ಪತ್ರೆಯಾಗಿತ್ತು. ಕಿನ್ನಿಗೋಳಿ ಹಾಗೂ ಆಸುಪಾಸಿನ ಹತ್ತಾರು ಊರುಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಕನ್ಸೆಟ್ಟ ಆಸ್ಪತ್ರೆಯೇ ಆಸರೆಯಾಗಿತ್ತು.
ಒಂದೆರಡು ರೋಗಕ್ಕೆ ಮಾತ್ರವಲ್ಲದೇ ಸಾಧ್ಯವಾದಷ್ಟು ರೋಗಿಗಳಿಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಬೇಕೆಂಬ ಹಂಬಲ ಇವರಲ್ಲಿದ್ದು ಅದಕ್ಕಾಗಿಯೇ ಕಾಲಕಾಲಕ್ಕೆ ತಕ್ಕಂತೆ ನುರಿತ ವೈದ್ಯರನ್ನು ಕನ್ಸೆಟ್ಟ ಆಸ್ಪತ್ರೆಗೆ ವಾರಕ್ಕೊಮ್ಮೆ ಬರ ಮಾಡಿಸಿ ಇಲ್ಲಿನ ಬಡಜನರ ಪರಿಸ್ಥಿತಿಗೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಿದ್ದರು. ಲಿಲಿಯಾನ್ ಸಿಕ್ವೇರಾ ಅವರ ನಿಧನ ಕಿನ್ನಿಗೋಳಿ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ.
ಮೃತರ ಅಂತ್ಯಕ್ರಿಯೆ ಏಪ್ರಿಲ್ 26 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಿನ್ನಿಗೋಳಿ ಇಮ್ಮಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್ ಸ್ಮಶಾನದಲ್ಲಿ ನಡೆಯಲಿದೆ.