ಬಂಟ್ವಾಳ, ಎ.26 (Daijiworld News/MB) : ಕೊರೊನಾದಿಂದ ಮೃತಪಟ್ಟ ಬಂಟ್ವಾಳದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ 47 ವರ್ಷದ ಮಹಿಳೆಗೆ ಕೊರೊನಾ ದೃಢಪಟ್ಟಿದೆ. ರಾಜ್ಯದಲ್ಲಿ ಏಕೈಕ ಪ್ರಕರಣ ಇದಾಗಿದೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ವೃದ್ಧೆ ಎ.21ರಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು ವೃದ್ದೆಯ ಸಂಪರ್ಕದಿಂದ ಸ್ವೀಪರ್ ಕೆಲಸ ಮಾಡುತ್ತಿದ್ದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲದ ಮಹಿಳೆಗೆ ಸೋಂಕು ದೃಢಪಟ್ಟಿದ್ದು ನಾಯಿಲ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ.
ವೃದ್ಧೆ ಮೃತಪಟ್ಟ ತಕ್ಷಣ ಆಸ್ಪತ್ರೆ ಸಿಬ್ಬಂದಿಯನ್ನು ಮಂಗಳೂರಿನಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು ಗಂಟಲ ದ್ರವದ ಮಾದರಿ ವರದಿ ಬಂದ ಬಳಿಕ ಕೊರೊನಾ ಇರುವುದು ದೃಢಪಟ್ಟಿದೆ.
ಬಂಟ್ವಾಳ ಕುಟುಂಬದ ಇಬ್ಬರು ಸೇರಿ ಹೊರಗಿನ ಮೂವರಿಗೆ ಸೋಂಕು ತಗುಲಿದ್ದು ಈ ಪೈಕಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳ ಪೇಟೆಯಲ್ಲಿ 4, ಸಜೀಪನಡು1, ತುಂಬೆ 1, ಪಾಣೆಮಂಗಳೂರು ಸಮೀಪ 1 ಕೊರೊನಾ ಪ್ರಕರಣಗಳು ದಾಖಲಾಗಿದೆ.
ಇದೀಗ ದ.ಕ ಜಿಲ್ಲೆಯಲ್ಲಿ 19 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. 12 ಮಂದಿ ಗುಣಮುಖರಾಗಿದ್ದು 5 ಮಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನ ಸೋಂಕಿತರ ಸಂಖ್ಯೆ 501 ಕ್ಕೆ ಏರಿಕೆಯಾಗಿದ್ದು ಕರ್ನಾಟಕದ ದ.ಕ.ಜಿಲ್ಲೆಯ ಒಬ್ಬರಿಗೆ ಮಾತ್ರ ಇಂದು ಸೋಂಕು ದೃಢಪಟ್ಟಿದೆ.