ಮಂಗಳೂರು, ಮಾ 09: ನಗರಪಾಲಿಕೆಯ ನೂತನ ಮೇಯರ್ ಆಯ್ಕೆ ವಿಚಾರದಲ್ಲಿ ನಾನಾ ರೀತಿಯ ಲೆಕ್ಕಾಚಾರದ ಬಳಿಕ ಭಾಸ್ಕರ್ ಕೆ ಮೊಯ್ಲಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಮೇಯರ್ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಅಲ್ಪಸಂಖ್ಯಾತ ನಾಯಕರ ಗುಂಪೊಂದು ಗುರುವಾರ ತುರ್ತು ಸಭೆ ನಡೆಸಿ ಪಕ್ಷದ ಜಿಲ್ಲಾ ಹೈಕಮಾಂಡ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ಶುಕ್ರವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಪಕ್ಷದ ವಿವಿಧ ಜವಾಬ್ದಾರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರು ಮನಪಾಕ್ಕೆ ಒಂದು ಅವಧಿಯಲ್ಲಿ ಮುಸ್ಲಿಮ್ ಕಾರ್ಪೊರೇಟರ್ಗೆ ಮೇಯರ್ ಸ್ಥಾನ ಕೊಡಬೇಕು ಎಂದು ಕಳೆದ ವಾರ ಸಭೆ ಸೇರಿ ಆಗ್ರಹಿಸಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೂ ಮನವಿ ಸಲ್ಲಿಸಿದ್ದರು. ಆದರೂ ಅಲ್ಪಸಂಖ್ಯಾತ ನಾಯಕರ ಮಾತು ಕೇಳದೇ ಸಚಿವರು ಇಟ್ಟ ನಡೆಯನ್ನು ಖಂಡಿಸಿರುವ ಮುಖಂಡರು ಇದೀಗ ಹೈಕಮಾಂಡ್ ಗಮನ ಸೆಳೆದು, ಸಾಮೂಹಿಕ ರಾಜೀನಾಮೆಗೂ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಭೆಯಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಕಣಚೂರು ಮೋನು, ದ.ಕ. ಜಿಪಂ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದ ಅಬ್ದುಲ್ ರವೂಫ್ ಮತ್ತಿತರರು ಉಪಸ್ಥಿತರಿದ್ದರು.