ಮಂಗಳೂರು, ಎ.26 (Daijiworld News/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಅಗತ್ಯವೆನಿಸಿದರೆ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಕಸಬಾ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೋರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸಚಿವರು ಹಾಗೂ ಸಂಸದರು ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ತುರ್ತು ಸಭೆ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಬಂಟ್ವಾಳದಲ್ಲಿ ಮೇ 3ರವರೆಗೆ ಲಾಕ್ ಡೌನ್ನಲ್ಲಿ ಯಾವುದೇ ವಿನಾಯಿತಿ ಇಲ್ಲ. ಕಸಬಾ ಹೋಬಳಿಯ 92 ಮನೆಗಳು ಹಾಗೂ ನರಿಕೊಂಬು ಗ್ರಾಮಪಂಚಾಯತ್ ವ್ಯಾಪ್ತಿಯ 213 ಮನೆಗಳಲ್ಲಿ ಪ್ರತಿನಿತ್ಯ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳು ಭೇಟಿಕೊಟ್ಟು ವರದಿ ನೀಡಬೇಕು. ಬಂಟ್ವಾಳ ಕಸಬಾ ಹಾಗೂ ನರಿಕೊಂಬು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಲಾಕ್ ಡೌನ್ ನಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ದ.ಕ. ಜಿಲ್ಲೆಯಲ್ಲಿ ಒಟ್ಟು 19 ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 12 ಪ್ರಕರಣಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ. ಇಬ್ಬರು ಸಾವನ್ನಪ್ಪಿದ್ದು, ಉಳಿದ ಪ್ರಕರಣಗಳಲ್ಲಿ ನಿಗಾವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಮಧ್ಯೆ ಫಸ್ಟ್ ನ್ಯೂರೋ ಆಸ್ಪತ್ರೆಯ 198 ಸಿಬ್ಬಂದಿಗಳು ಹಾಗೂ ಇನ್ನಿತರರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಈ ಪೈಕಿ 49 ಪ್ರಕರಣಗಳ ವರದಿ ಬಂದಿದ್ದು, 48 ನೆಗೆಟಿವ್ ಒಂದು ಪಾಸಿಟಿವ್ ಆಗಿರುತ್ತದೆ. ಜಿಲ್ಲಾಡಳಿತದ ಪೂರ್ಣ ಕಣ್ಗಾವಲಿನಲ್ಲಿ ಕೋರೊನಾ ನಿಯಂತ್ರಣ ಮಾಡಲಾಗುತ್ತಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೆ ಘಟನೆಗಳನ್ನು ಲಘುವಾಗಿ ತೆಗೆದು ಕೊಳ್ಳದೆ, ಸ್ವಯಂ ಪ್ರೇರಿತ ಕರ್ಫ್ಯೂಗೆ ಒಳಪಡಬೇಕು ಎಂದು ಮನವಿ ಮಾಡಿರುವ ಸಚಿವರು, ಅನಿವಾರ್ಯವಾದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಬಂಟ್ವಾಳ ಕಸಬಾ ಹಾಗೂ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿ ಸೀಲ್ಡ್ ಡೌನ್ ಮಾಡಲಾಗಿದ್ದು, ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ತೆರೆದು ಸಾರ್ವಜನಿಕರ ಅನುಕೂಲಕ್ಕೆ ದೂರವಾಣಿ ಸಂಪರ್ಕ ನೀಡಲಾಗಿದೆ. 11 ಅಧಿಕಾರಿಗಳನ್ನು ಈ ಪ್ರದೇಶದಲ್ಲಿ ಹಗಲು-ರಾತ್ರಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಾರ್ವಜನಿಕರು ಮನೆಯಲ್ಲಿದ್ದುಕೊಂಡು ಅಗತ್ಯ ಸಾಮಾಗ್ರಿಗಳನ್ನು ತೆಗೆದುಕೊಳ್ಳಬಹುದು. ದಿನಸಿ ಸಾಮಗ್ರಿ, ಹಾಲು ದಿನಪತ್ರಿಕೆ, ಔಷಧಿ, ಊಟೋಪಚಾರ ತರಕಾರಿ ಹಣ್ಣು ಮಾಂಸಗಳನ್ನು ಸಾರ್ವಜನಿಕರ ಬೇಡಿಕೆಯಂತೆ ಒದಗಿಸಲು ಹಾಗೂ ಬ್ಯಾಂಕಿಂಗ್ ಸೇವೆ ಗ್ಯಾಸ್ ಇನ್ನಿತರ ಸೇವೆ ತುರ್ತು ಸೇವೆಗಳನ್ನು ಒದಗಿಸಲು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸರಕಾರ ಆದೇಶಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಅಧಿಕಾರಿಗಳು ಕಟ್ಟೆಚ್ಚರದಿಂದ ಕಾರ್ಯನಿರ್ವಹಿಸಬೇಕು, ವಲಸೆ ಕಾರ್ಮಿಕರು ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ತಕ್ಷಣ ಪರಿಹರಿಸಬೇಕು. ಆಹಾರಗಳ ಪೂರೈಕೆ ಸೇರಿದಂತೆ ಸ್ಥಳೀಯ ಶಾಸಕರಿಗೆ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಶಾಸಕ ರಾಜೇಶ್ ನಾಯಕ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ತಹಶೀಲ್ದಾರ್ ರಶ್ಮಿ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.