ಮಂಗಳೂರು, ಏ 27 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯೂ ಕೊರೊನಾ ರೆಡ್ ಝೋನ್ ನಲ್ಲಿದ್ದು, ಇಲ್ಲಿ ಇದ್ದಕ್ಕಿದ್ದಂತೆ ಸೋಂಕಿನಿಂದ ಎರಡು ಸಾವುಗಳು ಸಂಭವಿಸಿದರೂ, ಜಿಲ್ಲೆಯ ಜನರು ಹಾಗೂ ಜಿಲ್ಲಾಡಳಿತ ಇನ್ನು ಎಚ್ಚೆತ್ತುಕೊಂಡಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ.
ಮೀನುಗಾರಿಕೆಗೆ ಅನುಮತಿಸಿದ ಬಳಿಕ ಇತರ ರಾಜ್ಯಗಳಿಂದ ಮೀನು ತುಂಬಿದ ಟ್ರಕ್ ಗಳು ರಾತ್ರಿ ಮೀನುಗಾರಿಕಾ ಬಂದರಿಗೆ ಆಗಮಿಸುತ್ತಿದ್ದು, ಮೀನುಗಾರಿಕೆಗಾಗಿ ಬಂದರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಕಾರ್ಮಿಕರು ಸೇರುತ್ತಾರೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲಾಡಳಿತ ಇಲ್ಲಿ ಮೀನು ಸರಬರಾಜಿಗೆ ಅನುಮತಿ ನೀಡಿದೆ. ಇಲ್ಲಿ ಮೀನುಗಳನ್ನು ಲಾರಿಗಳಿಂದ ಅನ್ ಲೋಡ್ ಮಾಡಲು ಜೊತೆಗೆ ಮೀನುಗಳ ಹರಾಜು ಪ್ರತಿಕ್ರಿಯೆ ನಡೆಯುತ್ತದೆ. ಈ ಕಾರಣಕ್ಕೆ ಯಾವುದೇ ಸಾಮಾಜಿಕ ಅಂತರ ಪಾಲಿಸದೆ ಬಂದರು ಪ್ರದೇಶದಲ್ಲಿ 2,000 ಕ್ಕೂ ಹೆಚ್ಚು ಜನರು ಒಟ್ಟಿಗೆ ಸೇರುತ್ತಾರೆ. ಮಾಸ್ಕ್, ಕೈಗವಸುಗಳು ಮತ್ತು ಇತರ ಸುರಕ್ಷತಾ ಸಾಧನಗಳನ್ನು ಧರಿಸದೆ ಕಾರ್ಮಿಕರು ಮೀನು ವಿಲೇವಾರಿ ಕೆಲಸದಲ್ಲಿ ನಿರತರಾಗಿದ್ದಾರೆ.
ಪ್ರತಿನಿತ್ಯ ಬಂದರಿಗೆ ಇತರ ರಾಜ್ಯಗಳಿಂದ ನೂರಕ್ಕೂ ಹೆಚ್ಚು ಟ್ರಕ್ಗಳು ಇಲ್ಲಿಗೆ ಬರುತ್ತವೆ. ಇಲ್ಲಿ ಖರೀದಿಸಿದ ಮೀನುಗಳನ್ನು ಮರುದಿನ ಕರಾವಳಿಯಾದ್ಯಂತ ಸರಬರಾಜು ಮಾಡಲಾಗುತ್ತದೆ. ಹೀಗಾಗಿ ಕೊರೊನಾ ವೈರಸ್ ಸೋಂಕು ಇಲ್ಲಿಂದ ಇತರ ಹಳ್ಳಿಗಳಿಗೆ ಹರಡುವ ಅಪಾಯವಿದೆ.
ಹಿಂದೆ, ಮೀನುಗಾರಿಕೆ ಬಂದರಿನಿಂದ ಮೀನುಗಳನ್ನು ಇತರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು. ಕರ್ನಾಟಕದಲ್ಲಿ ಈಗ ಆಳ ಸಮುದ್ರ ಮೀನುಗಾರಿಕೆಯನ್ನು ನಿಷೇಧಿಸಲಾಗಿರುವುದರಿಂದ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ರಾಜ್ಯಗಳಿಂದ ಮೀನುಗಳು ಬರುತ್ತಿವೆ. ಇದು ರಂಜಾನ್ ಅವಧಿಯಾಗಿದ್ದು, ರಾತ್ರಿಯಲ್ಲಿ ಮೀನು ವ್ಯಾಪಾರ ನಡೆಸಲು ಜಿಲ್ಲಾಡಳಿತ ವಿಶೇಷ ಅನುಮತಿ ನೀಡಿದೆ. ಆದರೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಯಾವುದೇ ವ್ಯವಸ್ಥೆ ಮಾಡದ ಕಾರಣ, ಕರೋನವೈರಸ್ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಈ ಬಗ್ಗೆ ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವುದು ಒಳಿತು.