ಮಂಗಳೂರು, ಎ.27 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ರೈತರು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಂಗಳೂರು ದಕ್ಷಿಣದ ಮಾಜಿ ಶಾಸಕರಾದ ಜೆ.ಆರ್ ಲೋಬೋರವರ ನೇತೃತ್ವದಲ್ಲಿ ಮಂಗಳೂರಿನ ನೀರುಮಾರ್ಗ ಬಳಿ ಇರುವ ಮೇರ್ಲಪದವು ಎಂಬಲ್ಲಿರುವ ತರಕಾರಿ ಕೃಷಿ ಬೆಳೆಗಾರರ ತೋಟಕ್ಕೆ ತೆರಳಿ ರೈತರು ಬೆಳೆಸಿದ ಸಾವಯವ ಕೃಷಿಯನ್ನು ಖರೀದಿ ಮಾಡಿ ಆಶ್ರಮಗಳಿಗೆ ನೀಡಿದರು.
ಕೆ.ಪಿ.ಸಿ.ಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ರವರು ಸ್ಥಳೀಯ ರೈತರು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿ ಅವಶ್ಯಕತೆ ಇದ್ದವರಿಗೆ ತಲುಪಿಸುವಂತೆ ತಿಳಿಸಿದ್ದು ಈ ನಿಟ್ಟಿನಲ್ಲಿ ಸ್ಥಳೀಯ ಕೃಷಿಕರ ಉತ್ಪನ್ನಗಳನ್ನು ಖರೀದಿ ಮಾಡಿರುವ ಜೆ.ಆರ್. ಲೋಬೋರವರು ಕೃಷಿಕರಿಗೆ ಪ್ರೋತ್ಸಾಹ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಪ್ರಧಾನವಾದವಲ್ಲದಿದ್ದರೂ ಇಲ್ಲಿಯ ಗ್ರಾಮೀಣ ಭಾಗಗಳಲ್ಲಿ ಜನರಿಗೆ ಕೃಷಿಯೇ ಜೀವನಾಧಾರವಾಗಿದೆ. ಮೇರ್ಲಪದವಿನ ಈ ಭಾಗದಲ್ಲಿ ಸುಮಾರು 80 ಕ್ಕೂ ಅಧಿಕ ಕುಟುಂಬಗಳು ಕೃಷಿಯನ್ನೇ ನಂಬಿಕೊಂಡು ಜೀವಿಸುತ್ತಿದ್ದು ತರಕಾರಿ ವ್ಯಾಪಾರವನ್ನು ಎಪಿಎಂಸಿಗೆ ಸ್ಥಳಾಂತರ ಮಾಡಿರುವುದರಿಂದ ಕೃಷಿಕರಿಗೆ ಸಂಕಷ್ಟ ಉಂಟಾಗಿದೆ. ಆ ನಿಟ್ಟಿನಲ್ಲಿ ಇಲ್ಲಿಯ ಸ್ಥಳೀಯ ಕೃಷಿಕರಿಂದ ತರಕಾರಿಗಳು ಖರೀದಿ ಮಾಡಿದ್ದೇವೆ. ಈ ಲಾಕ್ಡೌನ್ ಸಂದರ್ಭದಲ್ಲಿ ಆಶ್ರಮಗಳಲ್ಲಿಯೂ ಆಹಾರಕ್ಕೆ ಕಷ್ಟವಾಗುತ್ತದೆ. ಆ ನಿಟ್ಟಿನಲ್ಲಿ ಈ ತರಕಾರಿಗಳನ್ನು ಆಶ್ರಮಗಳಿಗೆ ನೀಡಲಾಗುತ್ತದೆ ಎಂದು ಮಾಜಿ ಶಾಸಕರಾದ ಜೆ.ಆರ್ ಲೋಬೋರವರು ತಿಳಿಸಿದರು.
ಹಾಗೆಯೇ ಈ ರೈತರಿಗೆ ಮಾರುಕಟ್ಟೆಯ ವ್ಯವಸ್ಥೆ ಮಾಡಲು ಪ್ರಯತ್ಸಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಕೃಷಿಕರೋರ್ವರು, ನಮ್ಮ ಬೆಳೆಗಳನ್ನು ಮಂಗಳೂರಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೆವು. ಆದರೆ ಈಗ ವ್ಯಾಪಾರವನ್ನು ಎಪಿಎಂಸಿಗೆ ಸ್ಥಳಾಂತರ ಮಾಡಲಾಗಿದೆ. ಇದರಿಂದಾಗಿ ಸ್ಥಳೀಯ ರೈತರಿಗೆ ಸಂಕಷ್ಟ ಉಂಟಾಗಿದೆ. ಇಲ್ಲಿ ಸ್ಥಳೀಯವಾದ ಕೃಷಿಕರಿಗೆ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಬಸಳೆ, ಅಲಸಂಡೆ, ಬಾಳೆಕಾಯಿ, ಹರಿವೆ ಸೊಪ್ಪು, ಸಿಹಿಕುಂಬಳ, ಬೂದುಕುಂಬಳ ಮೊದಲಾದ ಬೆಳೆಗಳನ್ನು ಈ ತೋಟದಲ್ಲಿ ಬೆಳೆಯಲಾಗಿದ್ದು ಕಾಂಗ್ರೆಸ್ ಕಾರ್ಯಕರ್ತರ ಈ ಕಾರ್ಯದೊಂದಿಗೆ ಸಾಮಾಜಿಕ ಕಾರ್ಯಕರ್ತ ಲೆಸ್ಲಿ ರೇಗೊ ಕೈಜೋಡಿಸಿದ್ದಾರೆ.
ಈ ಸಂದರ್ಭದಲ್ಲಿ ಟಿ.ಕೆ.ಸುಧೀರ್, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಬಿ. ಸಾಲ್ಯಾನ್,ಡೆನ್ನಿಸ್ ಡಿ ಸಿಲ್ವ, ಕೃತಿನ್ ಕುಮಾರ್, ಉದಯ್ ಕುಮಾರ್, ರಘುರಾಜ್ ಕದ್ರಿ, ರಾಜೇಶ್ ಕದ್ರಿ, ಸಮರ್ಥ್ ಭಟ್, ನಾಗೇಂದ್ರ, ಸಂತೋಷ ನೀರ್ ಮಾರ್ಗ, ಲೆಸ್ಲಿ ರೇಗೊ ಮುಂತಾದವರು ಉಪಸ್ಥಿತರಿದ್ದರು. ಬಳಿಕ ಮರೋಳಿ ಎಂಬಲ್ಲಿರುವ ವೈಟ್ ಡೋವ್ಸ್, ಸ್ನೇಹಾಲಯ, ಜಪ್ಪು ಪ್ರಶಾಂತ್ ನಿವಾಸ್ ಮಂಗಳೂರಿನ ಇನ್ನಿತರ ಸೇರಿದಂತೆ ಹಲವು ಅನಾಥಾಲಯಗಳಿಗೆ ತರಕಾರಿಯನ್ನು ಹಂಚಲಾಯಿತು.