ಮಂಗಳೂರು, ಏ 27 (Daijiworld News/MSP): ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಕೇಂದ್ರ ಮಾರುಕಟ್ಟೆಯ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ದಿವಾಕರ್ ಪಾಂಡೇಶ್ವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಈ ಕುರಿತು ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಕೇಂದ್ರ ಮಾರುಕಟ್ಟೆಯಲ್ಲಿರುವ ತರಕಾರಿ ಹಾಗೂ ಹಣ್ಣುಹಂಪಲು ಚಿಲ್ಲರೆ ವ್ಯಾಪಾರಸ್ಥರಿಗೆ ಒದಗಿಸುವ ತಗಡಿನ ತಾತ್ಕಾಲಿಕ ಶೆಡ್ ಗಳ ನಿರ್ಮಾಣ ಕಾರ್ಯ ನಾಳಿನಿಂದಲೇ ಪ್ರಾರಂಭಿಸಿ, ಒಂದು ವಾರದೊಳಗಡೆ ಪೂರ್ಣಗೊಳಿಸಲು ಈ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಹಾಗೂ ನಗರದ ಹೃದಯಭಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಕಾಯ್ದಿರಿಸಿದ ಜಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾಗುವ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಈ ತಾತ್ಕಾಲಿಕ ಶೆಡ್ ನಲ್ಲಿರುವ ವ್ಯಾಪಾರಸ್ಥರನ್ನು ಆ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿಯಲ್ಲಿ ನಗರದ ಪ್ರಮುಖ ಭಾಗದ 3.60 ಎಕ್ರೆ ಜಾಗದಲ್ಲಿ ಕೇಂದ್ರ ಮಾರುಕಟ್ಟೆಯು ಯಾವ ರೀತಿಯಲ್ಲಿ ಪಿಪಿಪಿ ಮಾಡೆಲ್ ನಲ್ಲಿ ಆಗುತ್ತದೆ, ಅದರಿಂದ ತರಕಾರಿ, ಹಣ್ಣು ಹಂಪಲು ಹಾಗೂ ಮಾರ್ಕೇಟ್ ವ್ಯಾಪಾರಿಗಳಿಗೆ ಏನಾದರೂ ಸಮಸ್ಯೆಗಳಾಗುತ್ತದೆಯೋ,ಅಥವ ಅಂತಹ ಸನ್ನಿವೇಶ ನಿರ್ಮಾಣವಾದರೆ ಅದನ್ನು ಸರಿಪಡಿಸುವ ಕುರಿತು ಹಾಗೂ ಪಿಪಿಪಿ ಮಾಡೆಲ್ ನಲ್ಲಿ ನಿರ್ಮಾಣವಾಗುವ ಕಾರಣ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಪಾಲಿಕೆಯ ಅಧೀನಕ್ಕೆ ಒಳಪಡುವ ಪ್ರದೇಶವನ್ನು ಗುರುತಿಸಿ ಅದನ್ನು ಜನರಿಗೆ ಯಾವ ರೀತಿಯಾಗಿ ನೀಡಬೇಕೆಂಬ ಬಗ್ಗೆ ಸಮಗ್ರವಾಗಿ ಚಿಂತನೆ ಮಾಡಲಾಯಿತು. ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ಕಟ್ಟಡವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಜನರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಯೋಜನೆ ರೂಪಿಸುವ ಕುರಿತು ಚರ್ಚೆ ನಡೆಯಿತು ಎಂದು ತಿಳಿಸಿದ್ದಾರೆ.
ಹಾಗೂ ಈ ಕಾಮಗಾರಿಯ ಪೂರ್ಣ ವಿವರಗಳನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಒದಗಿಸಲಾಗುವುದು. ಹಾಗಾಗಿ ವ್ಯಾಪಾರಿಗಳಿಗೆ ಈ ಕುರಿತು ಗೊಂದಲಗಳಿದ್ದರೆ ಅಥವ ಸಂದೇಹಗಳಿದ್ದರೆ ಶಾಸಕರನ್ನು, ಮೇಯರ್ ಅವರನ್ನು ನೇರವಾಗಿ ಭೇಟಿ ಮಾಡಿ ಮಾಹಿತಿ ಪಡೆಯಬಹುದೆಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿ ನಜೀರ್,ಮನಪಾ ಆಯುಕ್ತರಾದ ಶಾನಾಡಿ ಅಜಿತ್ ಹೆಗ್ಡೆ, ಉಪ ಆಯುಕ್ತರಾದ ಸಂತೋಷ್ ಕುಮಾರ್,ಉಪ ಮಹಾಪೌರರಾದ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಜಗದೀಶ್ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು,ಸ್ಮಾರ್ಟ್ ಸಿಟಿ ಅಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.