ವಿಟ್ಲ, ಏ 27 (DaijiworldNews/SM): ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ವಿಟ್ಲದ ಚಂದಳಿಕೆ ನಿವಾಸಿ ನರ್ಸ್ ಸಹಿತ ಐವರ ವರದಿ ನೆಗೆಟಿವ್ ಆಗಿದೆ. ಇದರಿಂದ ವಿಟ್ಲದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಮಂಗಳೂರಿನ ಪಡೀಲ್ ಫಸ್ಟ್ ನ್ಯೂರೋದಲ್ಲಿ ಬಂಟ್ವಾಳದ ಮಹಿಳೆ ಕೊರೊನಾದಿಂದ ಮೃತಪಟ್ಟ ಬಳಿಕ ಇಡೀ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಮುಂಜಾಗೃತ ಕ್ರಮವಾಗಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದು ರಜೆಯಲ್ಲಿ ಮನೆಗೆ ತೆರಳಿದ್ದವರಿಗೆ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿತ್ತು. ಅದರಂತೆ ವಿಟ್ಲದ ಒಬ್ಬರು ನರ್ಸ್ ಸೇರಿದಂತೆ ಐವರಿಗೆ ಕ್ವಾರಂಟೈನ್ ಗೆ ಸೂಚಿಸಲಾಗಿತ್ತು.
ಅಲ್ಲಿ ಕರ್ತವ್ಯದಲ್ಲಿದ್ದ ವಿಟ್ಲ ನಿವಾಸಿ ನರ್ಸ್ ಸೇರಿದಂತೆ ಐದು ಮಂದಿಯ ವರದಿ ನೆಗೆಟಿವ್ ಆಗಿದೆ. 14 ದಿನಗಳ ಹೋಂಕ್ವಾರಂಟೈನ್ ಬಳಿಕ ದಾದಿಯ ಸೇರಿದಂತೆ ಅವರ ಕುಟುಂಬವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆ ವರದಿ ನೆಗೆಟಿವ್ ಬರುವ ಮೂಲಕ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಏಪ್ರಿಲ್ 12ರಿಂದ ನರ್ಸ್ ಕ್ವಾರಂಟೈನ್ ನಲ್ಲಿದ್ದರು. 14 ದಿನಗಳ ಹಾಸ್ಪಿಟಲ್ ಕ್ವಾರಂಟೈನ್ ಮುಗಿದ ಬಳಿಕ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದೀಗ ಅವರ ವರದಿ ನೆಗೆಟಿವ್ ಬಂದಿದೆ. ಅವರೊಂದಿಗೆ ಹೋಂಕ್ವಾರಂಟೈನ್ ನಲ್ಲಿದ್ದ ಮನೆ ಮಂದಿಯ ವರದಿಯೂ ಕೂಡ ನೆಗೆಟಿವ್ ಆಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ ಹದಿನಾಲ್ಕು ದಿನಗಳ ಕಾಲ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.
ಪ್ರಮುಖ ವಿಚಾರವೆಂದರೆ, ಕೊರೊನಾದಿಂದ ಮೃತಪಟ್ಟ ಮಹಿಳೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ನರ್ಸ್ ಆಸ್ಪತ್ರೆಯಲ್ಲಿ ಸೇವೆಯಲ್ಲಿರಲಿಲ್ಲ. ಅವರು ರಜೆಯಲ್ಲಿ ಮನೆಯಲ್ಲೇ ಇದ್ದರು. ಆದರೂ ಕೆಲವರು, ಅವರ ಬಗ್ಗೆ ಸುಳ್ಳು ಸುದ್ದಿ, ತಪ್ಪು ಮಾಹಿತಿಗಳನ್ನು ರವಾನಿಸಿದ್ದರು. ಹಾಗೂ ನರ್ಸ್ ಸೇರಿದಂತೆ ಅವರ ಕುಟುಂಬವನ್ನು ವಕ್ರ ದೃಷ್ಟಿಯಲ್ಲಿ ನೋಡುತ್ತಿದ್ದರು. ಆದರೆ, ಎಲ್ಲಾ ಊಹಾಪೋಹಗಳು ಸುಳ್ಳಾಗಿವೆ.
ಇನ್ನು ಅವರನ್ನು ಸಂಪರ್ಕ ಮಾಡಿದವರೆಲ್ಲ ಕ್ವಾರಂಟೈನ್ ನಲ್ಲಿ ಇಡಬೇಕು ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಇದೀಗ ನರ್ಸ್ ಸೇರಿದಂತೆ ಎಲ್ಲರ ವರದಿ ನೆಗೆಟಿವ್ ಬಂದಿರುವುದರಿಂದ ವಿಟ್ಲದ ಜನತೆ ನಿಟ್ಟುಸಿರು ಬಿಡುವಂತಾಗಿದೆ.