ಮಂಗಳೂರು, ಎ.28 (Daijiworld News/MB) : ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗದಿರುವ ಕಾರಣದಿಂದಾಗಿ ದ.ಕ. ಜಿಲ್ಲೆಯ ಮೂರು ಪ್ರದೇಶಗಳನ್ನು ಸೀಲ್ಡೌನ್ ಮುಕ್ತಗೊಳಿಸಿ ದ.ಕ. ಜಿಲ್ಲಾಧಿಾರಿ ಸಿಂಧೂ ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಸಜಿಪ ನಡು, ಬೆಳ್ತಂಗಡಿ ತಾಲೂಕಿನ ಕರಾಯ ಹಾಗೂ ಸುಳ್ಯದ ಅಜ್ಜಾವರ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಈ ಪ್ರದೇಶದಲ್ಲಿ ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದ ಕಾರಣದಿಂದಾಗಿ ಹಾಗೂ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳ ಕ್ವಾರೆಂಟೈನ್ ಮುಕ್ತಾಯಗೊಂಡಿರುವುದು ಸೀಲ್ಡೌನ್ ತೆರವುಗೊಳಿಸಲಾಗಿದೆ.
ಹಾಗೆಯೇ ಈ ಮೂರು ಪ್ರದೇಶದಲ್ಲಿ ರೋಗಿಗಳು ಕೂಡಾ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಪ್ರಸ್ತುತ ದ.ಕ. ಜಿಲ್ಲೆಯಲ್ಲಿ ಪುತ್ತೂರು ತಾಲೂಕಿನ ಸಂಪ್ಯ, ಉಪ್ಪಿನಂಗಡಿ, ಬಂಟ್ವಾಳದ ಕಸಬಾ, ತುಂಬೆ, ನರಿಕೊಂಬು, ಮಂಗಳೂರು ತಾಲೂಕಿನ ಪಡೀಲ್ ಸಮೀಪದ ಫಸ್ಟ್ ನ್ಯುರೋ ಆಸ್ಪತ್ರೆ, ಕುಲಶೇಖರ ಹಾಗೂ ತೊಕ್ಕೂಟ್ಟು ಸೇರಿ ಎಂಟು ಪ್ರದೇಶಗಳಲ್ಲಿ ಸೀಲ್ಡೌನ್ ಇದೆ.