ಕುಂದಾಪುರ, ಏ 28 (Daijiworld News/MSP): ಮುಂಬೈಯಿಂದ ಸರಕು ಸಾಗಾಟದ ವಾಹನದ ಮೂಲಕ ಮಂಡ್ಯಕ್ಕ್ ಬಂದಿದ್ದ ವ್ಯಕ್ತಿಗೆ ಕೊರೊನಾ ಇರುವುದು ದೃಢವಾಗಿದ್ದು, ಆತ ಪ್ರಯಾಣದ ವೇಳೆ ಸ್ನಾನ ಮತ್ತು ಊಟಕ್ಕೆ ತಂಗಿದ್ದ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ ನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಮುಂಬಯಿಯಿಂದ ಖರ್ಜೂರ ಸಾಗಾಟ ವಾಹನದಲ್ಲಿ ಆತ ಬಂದಿದ್ದು, ಶಿರೂರು ಟೋಲ್ಗೇಟ್ ಮತ್ತು ಸಾಸ್ತಾನ ಟೋಲ್ಗೇಟ್ ನಡುವಿನ ಸಮುದ್ರದ ತಟದಲ್ಲಿರುವ ಯಾವುದೋ ಪೆಟ್ರೋಲ್ ಬಂಕ್ ಒಂದರಲ್ಲಿ ತಾನು ಸ್ನಾನ ಮಾಡಿರುವುದಾಗಿ ಮಂಡ್ಯದಲ್ಲಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದ.
ಸೋಮವಾರ ಸಂಜೆ ವೇಳೆಗೆ ಮಂಡ್ಯ ಜಿಲ್ಲಾಡಳಿತದಿಂದ ಬಂದ ಮಾಹಿತಿಯನ್ನು ಅನುಸರಿಸಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಹಾಗೂ ಕೋಟ ಎಸ್ಐ ನಿತ್ಯಾನಂದ ಗೌಡ ನೇತೃತ್ವದಲ್ಲಿ ಎಲ್ಲ ಪೆಟ್ರೋಲ್ ಬಂಕ್ಗಳ ಸಿಸಿ ಕೆಮರಾ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು. ಸೋಮವಾರ ತಡರಾತ್ರಿ ವೇಳೆಗೆ ತೆಕ್ಕಟ್ಟೆಯ ಬಂಕ್ನ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಆತ ಸ್ನಾನ ಮಾಡಿರುವ ಬಂಕ್ ಅದುವೇ ಎಂಬುದು ದೃಢವಾಯಿತು. ಪೆಟ್ರೋಲ್ ಬಂಕ್ ನ್ನು ತತ್ಕ್ಷಣವೇ ಸೀಲ್ಡೌನ್ ಮಾಡಿದ್ದು, ಸುತ್ತಲಿನ ಮೂರು ಕಿ.ಮೀ. ವ್ಯಾಪ್ತಿಯನ್ನೂ ಸೀಲ್ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಪೆಟ್ರೋಲಿಯಂ ಬಂಕ್ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿದೆ. ಕಳೆದೆರಡು ದಿನಗಳಿಂದ ಮಂಡ್ಯದ ಕೊರೋನಾ ಸೋಂಕಿತನ ಟ್ರಾವೆಲ್ ಹಿಸ್ಟರಿಗಾಗಿ ತಲೆಕೆಡಿಸಿಕೊಂಡಿದ್ದ ಉಡುಪಿ ಪೊಲೀಸರು, ನಿನ್ನೆ ರಾತ್ರಿ ಹೊತ್ತಿಗೆ ಆತ ತಂಗಿದ್ದ ಸ್ಥಳವನ್ನು ಪತ್ತೆಹಚ್ಚುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ.