ಮಂಗಳೂರು, ಏ 28 (Daijiworld News/MSP): ಈಗಾಗಲೇ ಕೇರಳ-ಕರ್ನಾಟಕ ಗಡಿ ಬಂದ್ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಂತ ಕೇರಳ ಸರ್ಕಾರ, ಇದೀಗ ಮತ್ತೊಂದು ಯೂಟರ್ನ್ ಹೊಡೆದಿದೆ. ಕೇರಳಕ್ಕೆ ಕರ್ನಾಟಕದಿಂದ ಆಗಮಿಸುವಂತಹ ಎಲ್ಲಾ ಗಡಿಯನ್ನು ಮುಚ್ಚಲು ಮುಂದಾಗುವ ಮೂಲಕ ಹೊಸ ಕ್ಯಾತೆ ತೆಗೆದಿದೆ.
ಕೇರಳ ಸರ್ಕಾರ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಎಲ್ಲಾ ಗಡಿಗಳನ್ನು ಬಂದ್ ಮಾಡಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈ ಕುರಿತಂತೆ ಕಿಡಿಕಾರಿರುವ ಶಾಸಕ ವೇದವ್ಯಾಸ ಕಾಮತ್, ಸೋಂಕು ಕಡಿಮೆ ಆಗ್ತಿದ್ದಂತೆ ಕೇರಳ ಸರ್ಕಾರ ಬಣ್ಣ ಬದಲಿಸಿದೆ. ಸಿಎಂ ಪಿಣರಾಯಿ ವಿಜಯನ್ ತನ್ನ (ಡಬ್ಬಲ್ ಸ್ಟಾಂಡರ್ಡ್) ದ್ವಂದ ನಿಲುವಿನ ಮುಖವಾಡವನ್ನು ಈ ಮೂಲಕ ಹೊರಹಾಕಿದ್ದಾರೆ. ದಕ ಜಿಲ್ಲೆಯೂ ಗಡಿ ಬಂದ್ ಗೆ ಮುಂದಾದಾಗ ಸುಪ್ರೀಂ ಮೆಟ್ಟಿಲೇರಿದ್ದರು. ಆದರೆ ಇದೀಗ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಎಲ್ಲಾ ಗಡಿಗಳನ್ನು ಬಂದ್ ಮಾಡಲು ಆದೇಶಿಸಿದ್ದಾರೆ. ಈ ಮೂಲಕ ಪಿಣರಾಯಿ ಆಷಾಡಭೂತಿತನ ಬಯಲಾಗಿದೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೇರಳ ಸರ್ಕಾರದ ನಡೆಗೆ ಕರ್ನಾಟಕ ಸೇರಿದಂತೆ, ನೆರೆ ರಾಜ್ಯಗಳು ಕೂಡ ಆಕ್ರೋಶ ವ್ಯಕ್ತ ಪಡಿಸಿವೆ.