ಉಡುಪಿ, ಏ 28 (Daijiworld News/MSP): ಉಡುಪಿ ಜಿಲ್ಲೆಯಲ್ಲಿ ಮತ್ತೊಮ್ಮೆ ಕೊರೋನಾ ವಾರಿಯರ್ಸ್ ಮೇಲೆ ಬೆದರಿಕೆ ಪ್ರಕರಣ ಮರುಕಳಿಸಿದೆ. ಕೊರೊನಾ ಸಂಬಂಧ ಕರ್ತವ್ಯ ನಿರತರಾಗಿದ್ದ ಆಶಾ ಕಾರ್ಯಕರ್ತೆ ಲಕ್ಷ್ಮೀ ಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಂದೀಪ್ ಮೇಸ್ತ ಯಾನೆ ವಿಕ್ಕಿ ಮೇಸ್ತ ಹಾಗೂ ಖಾರ್ವಿಕೆರೆ ನಿವಾಸಿ ಮಹೇಶ್ ಖಾರ್ವಿ ಬಂಧಿತರು. ಏ. ೨ ರಂದು ಸಂದೀಪ ಮೇಸ್ತ ಬೆಂಗಳೂರಿನ ಬಂದಿದ್ದು, ೨೮ ದಿನಗಳ ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿತ್ತು. ಆದರೆ ಆತ ಹೊರಗಡೆ ಓಡಾಡುತ್ತಿರುವ ಬಗ್ಗೆ ದೂರುಗಳು ಬಂದಿತ್ತು. ಏ.೨೧ ರಂದು ಮದ್ದುಗುಡ್ಡೆಯ ಬೋಟ್ ಬಿಲ್ಡಿಂಗ್ ಬಳಿ ಕಾಣಸಿಕ್ಕಿದ್ದು ನಿಯಮ ಉಲ್ಲಂಘನೆಯ ಬಗ್ಗೆ ಪ್ರಶ್ನಿಸಿದರು. ಈ ವೇಳೆ ಸಂದೀಪ್ ಹಾಗೂ ಆತನ ಗೆಳೆಯ ಮಹೇಶ್ ಖಾರ್ವಿ ಇವರು ನಾವು ಎಲ್ಲಿಯಾದರೂ ತಿರುಗುತ್ತೇವೆ, ಇದನ್ನು ಕೇಳಲು ನೀನು ಯಾರು?ಮುದ್ದುಗಡ್ಡೆಯಲ್ಲಿ ಬದುಕಲು ಬಿಡಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಏ.24 ರಂದು ಮತ್ತೆ ಹೊರಗಡೆ ಕಾಣಸಿಕ್ಕಗಲೂ, ಮನೆಗೆ ಹೋಗುವಂತೆ ತಿಳಿಸಿದಾಗ ಕರ್ತವ್ಯದಲ್ಲಿದ್ದ ಲಕ್ಷ್ಮೀ ಅವರಿಗೆ ಮತ್ತೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಕೆಲ ದಿನದ ಹಿಂದೆ 22ರಂದು ಉಡುಪಿ ಜಿಲ್ಲೆಯ ಪಡುಬಿದ್ರಿ ತಾಲೂಕಿನ ಉಚ್ಚಿಲದಲ್ಲಿ ಆರೋಗ್ಯ ಸಹಾಯಕಿ ಶ್ಯಾಮಲಾ ಅವರ ಮೇಲೆ ಹಲ್ಲೆ ಯತ್ನ, ಜೀವ ಬೆದರಿಕೆ ಘಟನೆ ನಡೆದಿತ್ತು. ಮಾಸ್ಕ್ ಹಾಕಿ ಅನ್ನೋ ಬುದ್ದಿ ಮಾತು ಹಾಗೂ ಹೊರ ಜಿಲ್ಲೆಯಿಂದ ಬರುವ ಬಗ್ಗೆ ಪ್ರಶ್ನಿಸಿದಕ್ಕೆ ಈ ಪ್ರಕರಣ ನಡೆದಿತ್ತು. ವಾರಿಯರ್ಸ್ ಮೇಲೆ ಬೆದರಿಕೆ, ಹಲ್ಲೆ ನಡೆದರೆ ಕಠಿಣ ಶಿಕ್ಷೆಗೆ ಒಳಪಡಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮತ್ತೆ ಬೆದರಿಕೆ ಪ್ರಕರಣ ನಡೆದಿದೆ.