ಉಳ್ಳಾಲ, ಏ 28 (DaijiworldNews/SM): ದೈಜಿವರ್ಲ್ಡ್ ವಾಹಿನಿ ನಡೆಸಿದ ಹಲೋ ಶಾಸಕರೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಲ್ಲಿ ಉಳ್ಳಾಲ ಕ್ಷೇತ್ರದಿಂದ ಹಲವು ಮಂದಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇದೀಗ ಬೆಳ್ತಂಗಡಿ ಶಾಸಕ ಅವರ ನೋವಿಗೆ ಸ್ಪಂದಿಸಿದ್ದಾರೆ. ಉಳ್ಳಾಲ ಕ್ಷೇತ್ರದಲ್ಲಿ 2100ಕಿಟ್ ಗಳನ್ನು ವಿತರಿಸುವ ಮೂಲಕ ಶಾಸಕ ಹರೀಶ್ ಪೂಂಜಾ ಮಾದರಿಯ ಕಾರ್ಯವನ್ನು ನಡೆಸಿದ್ದಾರೆ.
ದಿನಗಳ ಹಿಂದೆ ದೈಜಿವರ್ಲ್ಡ್ ವಾಹಿನಿಯಲ್ಲಿ ಹಲೋ ಶಾಸಕರೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕ ಹರೀಶ್ ಪೂಂಜಾ ಇದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನಿಂದ ಕಿಟ್ ನೀಡುವಂತೆ, ಕಷ್ಟದಲ್ಲಿರುವವರು ಯಾವುದೇ ನೋವು ತೋಡಿಕೊಂಡಿರಲಿಲ್ಲ. ಎಲ್ಲರೂ ಶಾಸಕರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಬಂಟ್ವಾಳ ತಾಲೂಕು ಹಾಗೂ ಉಳ್ಳಾಲಗಳಿಂದ ಸಹಾಯಕ್ಕಾಗಿ ಕೆಲವು ಕರೆಗಳು ಬಂದಿದ್ದವು. ಅದರಲ್ಲೂ ಉಳ್ಳಾಲ ಕ್ಷೇತ್ರದಿಂದ ಅಧಿಕ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಯುವ ನಾಯಕ ಅಭಿವೃದ್ಧಿ ಹರಿಕಾರ ಹರೀಶ್ ಪೂಂಜಾ ತಕ್ಷಣಕ್ಕೆ ಸ್ಪಂದಿಸಿದ್ದಾರೆ.
ಏಪ್ರಿಲ್ 27ರ ಸೋಮವಾರದಂದು ಉಳ್ಳಾಲ ಕ್ಷೇತ್ರಕ್ಕೆ ತೆರಳಿ 2100 ಕಿಟ್ ಗಳನ್ನು ಅಗತ್ಯವೆನಿಸಿರುವ ಬಡ ಅಸಾಹಾಯಕ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ. ಆ ಮೂಲಕ ಶಾಸಕ ಹರೀಶ್ ಪೂಂಜಾ ಎಲ್ಲರು ಮೆಚ್ಚುವ ಕಾರ್ಯವನ್ನು ಮಾಡಿದ್ದಾರೆ. ಬಡ ಜನರ ಮೇಲಿರುವ ಅವರ ಕಾಳಜಿ ಎತ್ತಿತೋರಿಸುವಂತೆ ಮಾಡಿದೆ. ದೂರದ ಬೆಳ್ತಂಗಡಿಯಿಂದ ಉಳ್ಳಾಲ ಕ್ಷೇತ್ರಕ್ಕೆ ತೆರಳಿ ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ. ಅವರ ಈ ಕಾರ್ಯ ಇತರರಿಗೂ ನಿಸ್ವಾರ್ಥ ಸೇವೆ ಸಲ್ಲಿಸಲು ಪ್ರೇರಣೆಯಾಗಲಿದೆ. ರಾಜಕೀಯ ಅನುಭವದಲ್ಲಿ ಕಿರಿಯವರಾಗಿದ್ದರೂ, ಸೇವಾ ಮನೋಭಾವದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.