ಉಡುಪಿ, ಏ 28 (DaijiworldNews/SM): ಕೊರೊನಾ ವಿರುದ್ಧದ ಯುದ್ಧದಲ್ಲಿ ಒಂದು ಹಂತದಲ್ಲಿ ಉಡುಪಿ ವಿಜಯ ಸಾಧಿಸಿದಂತಾಗಿದೆ. ಜಿಲ್ಲೆಯಲ್ಲಿ ಕಳೆದ 28 ದಿನಗಳಿಂದ ಕೊರೊನಾ ಸಂಬಂಧಿಸಿದಂತೆ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಇದುವೇ ಜಿಲ್ಲೆಯ ಜನತೆಯ ಆತಂಕ ದೂರವಾಗುವಂತೆ ಮಾಡಿದೆ.
ಕೊರೊನಾ ಪತ್ತೆಯಾಗದ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯನ್ನು ಗ್ರೀನ್ ಝೋನ್ ಎಂದು ಗುರುತಿಸಲಾಗಿದೆ. ಈ ನಡುವೆ ಕುಂದಾಪುರದ ತೆಕ್ಕಟ್ಟೆಯಲ್ಲಿ ಸೋಂಕುತನೊಬ್ಬನ ಸಂಪರ್ಕ ಆಗಿರುವುದು ಸ್ವಲ್ಪ ಆತಂಕಕ್ಕೆ ಕಾರಣವಾಗಿದೆ. ಆ ಪ್ರದೇಶದಲ್ಲಿದ್ದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಹಾಗೂ ಪ್ರದೇಶವೊಂದನ್ನು ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಗ್ರೀನ್ ಝೋನ್ ದಾಖಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೆಲವೊಂದು ವಿನಾಯಿಗಳನ್ನು ನೀಡಲಾಗಿದೆ. ಆದರೆ, ಲಾಕ್ ಡೌನ್ ನಿಯಮಗಳಲ್ಲಿ ವಿನಾಯಿತಿ ಇಲ್ಲ. ಯಾವುದೇ ಕಾರಣಕ್ಕೂ ಆಟೋ ರಿಕ್ಷಾಗಳು ಸಂಚರಿಸುವಂತಿಲ್ಲ. ಮುಂದಿನ ದಿನಗಳಲ್ಲಿ ಆಟೋ ರಿಕ್ಷಾ ಹಾಗೂ ಸಾರ್ವಜನಿಕ ಸಾರಿಗೆ ಸಂಪರ್ಕ ಕಂಡುಬಂದಲ್ಲಿ ಅವರ ವಾಹನಗಳನ್ನು ಮೊಟ್ಟುಗೋಲು ಹಾಕಲಾಗುವುದು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸುವುದು ಅಗತ್ಯವಾಗಿದ್ದು, ಇವುಗಳನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಯಾವ ಸೇವೆಗಳಿಗೆ ವಿನಾಯಿತಿ? ಇಲ್ಲಿದೆ ವಿವರಗಳು:
ಶಾಪ್ ಆಂಡ್ ಎಸ್ಟಾಬ್ಲಿಷ್ ಮೆಂಟ್ ಆಕ್ಸ್ನಲ್ಲಿ ಎಲ್ಲಾ ಶಾಪ್ಗಳು ಪುನಾರರಂಭ
ಚಿನ್ನದ ಅಂಗಡಿ, ಮಲ್ಟಿ ಬ್ರ್ಯಾಂಡ್, ಸಿಂಗಲ್ ಬ್ರ್ಯಾಂಡ್ ಶಾಪ್ಗಳಿಗೆ ಅವಕಾಶವಿಲ್ಲ
ಬ್ಯೂಟಿ ಪಾರ್ಲರ್, ಸೆಲೂನ್ಗಳು, ಸ್ಪಾಗಳು ತೆರೆಯುವಂತಿಲ್ಲ
ಹೋಟೆಲ್ ತೆರೆಯಬಹುದು, ಆದರೆ ಟೇಬಲ್ ಸರ್ವಿಸ್ ತೆರೆಯುವಂತಿಲ್ಲ
ಹೋಟೆಲ್ಗಳಲ್ಲಿ ಪಾರ್ಸೆಲ್ ಸರ್ವಿಸ್ ಮಾತ್ರ ನೀಡಬಹುದು
ಗ್ರಾಮೀಣ ಪ್ರದೇಶಗಳಲ್ಲಿ ಫ್ಯಾಕ್ಟರಿ, ಕಟ್ಟಡ, ಮನೆ ನಿರ್ಮಾಣಕ್ಕೆ ಅವಕಾಶ
ಕೃಷಿ, ಹೈನುಗಾರಿಕೆ, ಮರಳುಗಾರಿಕೆ, ಕ್ರಷರ್ ಚಟುವಟಿಕೆಗೂ ಅನುಮತಿ
ಅಂಗಡಿಗಳು ಬೆಳಿಗ್ಗೆ 7ರಿಂದ 11 ಗಂಟೆಯವರಗೆ ಮಾತ್ರವೇ ತೆರೆದಿರುವುದು
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ
ಮಾಸ್ಕ್ ಧರಿಸುವುದು ಕಡ್ಡಾಯ
ಆಟೋ ಸೇರಿದಂತೆ ಸಾರ್ವಜನಿಕ ಸಾರಿಗೆಗೆ ಅವಕಾಶವಿಲ್ಲ
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟನೆ