ಉಳ್ಳಾಲ, ಏ 28 (DaijiworldNews/SM): ದಿನಸಿ ಸಾಮಗ್ರಿಗಳನ್ನು ತರುವ ಟೆಂಪೋಗಳಿಗೆ ಪಂಚಾಯತಿ ಪತ್ರ ಪಡೆದು, ಪೊಲೀಸ್ ಇಲಾಖೆಯಿಂದ ಪಾಸ್ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು. ಗಡಿ ಭಾಗದಲ್ಲಿರುವ ಮಂದಿ ಗುರುತಿನ ಚೀಟಿ ತೋರಿಸಿದಲ್ಲಿ ದ್ವಿಚಕ್ರ ವಾಹನದಲ್ಲಿ ಒಂದು ಬಾರಿ ಹೋಗಿಬರಲು ಅವಕಾಶ ಕಲ್ಪಿಸಲಾಗುವುದು. ರಿಕ್ಷಾ ಚಾಲಕರು ತುರ್ತು ಆರೋಗ್ಯಕ್ಕಾಗಿ ಮಾತ್ರ ಆಸ್ಪತ್ರೆ ಪತ್ರ ಹಿಡಿದುಕೊಂಡು ಗಡಿಭಾಗದ ರಸ್ತೆಯನ್ನು ದಾಟಬಹುದು ಎಂದು ಶಾಸಕ ಯು.ಟಿ ಖಾದರ್ ತಲಪಾಡಿ ಗಡಿಭಾಗದ ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.
ಕೇರಳ-ಕರ್ನಾಟಕ ಗಡಿಭಾಗ ತಲಪಾಡಿ ಗ್ರಾಮಸ್ಥರು ಹಾಗೂ ಪೊಲೀಸರ ಜತೆಗೆ ಮಂಗಳವಾರ ನಡೆಸಿದ ಸಭೆಯಲ್ಲಿ ಮಾತನಾಡಿದರು. ತಲಪಾಡಿ ಗಡಿಭಾಗ ಪ್ರದೇಶವಾಗಿರುವುದರಿಂದ ಪೊಲೀಸರ ಚೆಕ್ ಪೋಸ್ಟ್ ಒಳಗಿರುವ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಸೂಕ್ತ ದಾಖಲೆಗಳನ್ನು ನೀಡಿ ವಾಹನಗಳಲ್ಲಿ ತೆರಳಬಹುದು. ಸುಖಾಸುಮ್ಮನೆ ಸದ್ಯದ ಸ್ಥಿತಿಯಲ್ಲಿ ತಿರುಗಾಡಲು ಅಸಾಧ್ಯ. ಅಲ್ಲದೆ ಕೇರಳದವರು ಒಳಭಾಗದಿಂದ ಬರುವ ಸಂಭವ ಇರುವುದರಿಂದ ಪೊಲೀಸರು ಜಿಲ್ಲಾಡಳಿತದ ಆದೇಶ ಪಾಲಿಸಬೇಕಾಗಿದೆ. ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಡುವವರ ಸಂಖ್ಯೆ ಮೂರಕ್ಕೆ ಏರಲಿದೆ. ಕೋವಿಡ್-19 ಆಸ್ಪತ್ರೆಯಲ್ಲಿರುವ ವೃದ್ಧ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಈ ನಿಟ್ಟಿನಲ್ಲಿ ಜನ ಸಹಕರಿಸಬೇಕಾಗಿದೆ ಎಂದರು.
ಕೇರಳದವರನ್ನು ಬಿಟ್ಟರೆ ಕೊರೊನಾ ಕೊಡುವ ಪರಿಣಾಮ: ಎಸಿಪಿ
ಇನ್ನು ಸಹಾಯಕ ಪೊಲೀಸ್ ಆಯುಕ್ತ ಕೋದಂಡರಾಮ್ ಮಾತನಾಡಿ, ರಿಕ್ಷಾದಲ್ಲಿ ಕೇರಳದವರನ್ನು ಪಾಸ್ ಮಾಡಿಕೊಂಡು ಬರುವಂತಹ ಕೆಲಸಗಳಾಗುತ್ತಿವೆ. ಓರ್ವ ಕೇರಳಿಗರನ್ನು ಒಳಗಿಂದ ಬಿಟ್ಟುಕೊಟ್ಟಲ್ಲಿ ಕೊರೊನಾ ಬಿಟ್ಟುಕೊಟ್ಟಷ್ಟು ಪರಿಣಾಮ ಆಗುತ್ತದೆ. ಜಿಲ್ಲೆಯ ಸ್ಥಿತಿ ಅಪಾಯದಲ್ಲಿದೆ. ಮೂರನೇ ಸೋಂಕಿತೆ ಸ್ಥಿತಿ ಚಿಂತಾಜನಕವಾಗಿದೆ. ಒಂದು ಬಾರಿ ಕೊರೊನಾ ಬಾಧಿಸಿತು ಎಂದಾದಲ್ಲಿ ಆತ ಜೀವನ ಪರ್ಯಂತ ಸಮಸ್ಯೆಗಳನ್ನು ಎದುರಿಸುತ್ತಾ ಬಾಳಬೇಕು. ಜನ ಸುತ್ತಾಡುತ್ತಾರೆಂದಾದಲ್ಲಿ ಪೊಲೀಸರ ಅವಶ್ಯಕತೆಯೇ ಇರುವುದಿಲ್ಲ. ಕೇರಳದವರು ಬರಬಾರದು ಅನ್ನುವ ಉದ್ದೇಶದಿಂದ ಹಾಗೂ ಸೋಂಕಿತರ ಲೆಕ್ಕ ಸಿಗದಷ್ಟು ಕಷ್ಟವಾಗಬಹುದು ಅನ್ನುವ ಉದ್ದೇಶದಿಂದ ಗಡಿಭಾಗದಲ್ಲಿ ಜಿಲ್ಲೆಯಾದ್ಯಂತ ಪೊಲೀಸರು ಪಹರೆ ನಡೆಸುತ್ತಿದ್ದಾರೆ ಎಂದರು.