ಮಂಗಳೂರು,ಏ 10 (Daijiworld News/MSP): ಸರಕಾರದ ಸೂಚನೆಯಂತೆ ವಲಸೆ ಕಾರ್ಮಿಕರನ್ನು ಅವರ ಸ್ವಗ್ರಾಮಕ್ಕೆ ಹಾಗೂ ಕೆಲಸದ ಸ್ಥಳಗಳಿಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದೆ. ವಲಸೆ ಕಾರ್ಮಿಕರು ತಾವು ಇರುವ ಸ್ಥಳದಲ್ಲಿಯೇ ಇದ್ದು, ಆಯಾ ವಾಡ್೯ ನಲ್ಲಿ ಸ್ಥಳೀಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲಿದ್ದಾರೆ. ನಂತರ ಕಾರ್ಮಿಕರಿಗೆ ಪ್ರಯಾಣದ ಬಗ್ಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ವಲಸೆ ಕಾರ್ಮಿಕರು ಯಾವುದೇ ಕಾರಣಕ್ಕೂ ತಾವು ವಾಸ ಇದ್ದ ಸ್ಥಳದಿಂದ ಲಾಕ್ ಡೌನ್ ಉಲ್ಲಂಘಿಸಿ ಪುರಭವನಕ್ಕೆ ಬರಬಾರದು. ಎಲ್ಲಾ ವಿವರ ಸಂಗ್ರಹಿಸಿದ ನಂತರ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು. ಗುತ್ತಿಗೆದಾರರು ಅಥವಾ ಕೆಲಸದ ಮೇಲ್ವಿಚಾರಕರು ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುವ ಉದ್ದೇಶದಿಂದ ನಗರಕ್ಕೆ ಕರೆದುಕೊಂಡು ಬಂದರೆ ಅಂತಹವರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.