ಉಡುಪಿ, ಎ.29 (Daijiworld News/MB) : ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೈದ್ಯರು ರಕ್ಷಣೆಗಾಗಿ ಬಳಸಲಾಗುವ ವೈಯಕ್ತಿಕ ಸುರಕ್ಷಣಾ ಸಾಧನ (ಪಿಪಿಇ ಕಿಟ್) ಅಲೆವೂರು ಗ್ರಾಮ ಪಂಚಾಯತ್ನ ಕೊಡಂಗಳ ನದಿಯಲ್ಲಿ ಮಂಗಳವಾರ ಪತ್ತೆಯಾಗಿದೆ.
ನದಿಯಲ್ಲಿ ಪಿಪಿಇ ಕಿಟ್ ಇರುವುದನ್ನು ಗಮನಿಸಿದ ಪಂಚಾಯತ್ ಕಚೇರಿ ಸಿಬ್ಬಂದಿ ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದು ಆರೋಗ್ಯ ಇಲಾಖೆಯು ಪೊಲೀಸರಿಗೆ ದೂರು ನೀಡಿದೆ.
ವೈದ್ಯಕೀಯ ಚಿಕಿತ್ಸೆಗಾಗಿ ಮಾತ್ರ ಈ ಪಿಪಿಇ ಕಿಟ್ ಬಳಸುತ್ತಿರುವುದರಿಂದ ಈ ಕಿಟ್ನ್ನು ಯಾರು ಬಳಸಿದ್ದಾರೆ, ನದಿಗೆ ಎಸೆದವರು ಯಾರು ಹಾಗೂ ಎಸೆಯಲು ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಾಗಿದೆ.
ಆದರೆ ಪೊಲೀಸರು ಮಂಗಳವಾರ ರಾತ್ರಿಯ ತನಕ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿಲ್ಲ ಎಂದು ತಿಳಿದು ಬಂದಿದೆ.
ಈ ಬಳಸಿದ ಪಿಪಿಇ ಬಗ್ಗೆ ಪೊಲೀಸರು ತನಿಖೆ ನಡೆಸಿದ ಬಳಿಕವಷ್ಟೇ ಬಯೋಕೆಮಿಕಲ್ ವೇಸ್ಟ್ ಮ್ಯಾನೆಜ್ ಮೆಂಟ್ ನಿಯಮಗಳ ಪ್ರಕಾರ ನಾಶ ಮಾಡಬೇಕು. ಈ ಪ್ರಕ್ರಿಯೆಯ ವಿವರಗಳನ್ನು ಪಂಚಾಯತ್ಗೆ ನೀಡಲು ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದು ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.