ಕಾರ್ಕಳ, ಏ 29(Daijiworld News/MSP): ದೇಶದೆಲ್ಲೆಡೆ ಲಾಕ್ ಡೌನ್ ನಿಂದ ಮನೆಯಲ್ಲಿ ಇದ್ದು ಕಾಲಹರಣ ಮಾಡುವ ಜನಗಳ ಮಧ್ಯೆ ಇಲ್ಲೊಂದು ಕುಟುಂಬದ ಸದಸ್ಯರು ಯಾರ ಸಹಾಯವೂ ಇಲ್ಲದೆ ಐದೇ ದಿನದಲ್ಲಿ ಸುಮಾರು ೨೫ ಅಡಿ ಆಳದ ಬಾವಿಯನ್ನು ತೋಡಿ ನೀರು ಪಡೆದು ಸಂಭ್ರಮಿಸಿದ್ದಾರೆ.
ಕಾರ್ಕಳ ತಾಲೂಕಿನ ಬೋಳ ನಿವಾಸಿ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಖ್ಯಾತಿಯ ಅಕ್ಷತಾ ಪೂಜಾರಿ ಬೋಳ ಇವರ ಮನೆಯ ಸುಮಾರು ಏಳು ಮಂದಿ ಸದಸ್ಯರು ಮನೆಯಲ್ಲಿ ಕೂತು ಬೋರು ಆಗುವುದನ್ನು ತಡೆಯಲು ಮನೆಯ ಸಮೀಪ ಒಂದು ಬಾವಿಯನ್ನು ತೋಡುವುದಕ್ಕೆ ಆಲೋಚನೆಯನ್ನು ಮಾಡಿದರು ಅದರಂತೆ ಐದೇ ದಿನದಲ್ಲಿ ೨೫ ಅಡಿ ಆಳದ ಬಾವಿಯನ್ನು ತೋಡಿ ನೀರು ಪಡೆದಿದ್ದಾರೆ. ಅಕ್ಷತಾ ಪೂಜಾರಿಯವರ ಸಹೋದರಾದ ಅಶೋಕ್ ಮತ್ತು ಅರುಣ್ ಹಾಗೂ ಸಹೋದರಿಯ ಮಕ್ಕಳು ಸೇರಿ ಬಾವಿ ತೋಡುವ ಕೆಲಸಕ್ಕೆ ಇಳಿದಿದ್ದು ಇದೀಗ ಯಶಸ್ಸು ಕಂಡಿದ್ದಾರೆ.
ಕುಟುಂಬದವರೇ ಬಾವಿ ತೋಡಿದರು : ಮನೆಯ ಸಮೀಪ ತುಂಬಾ ಹಳೇಯದಾದ ಒಂದು ಬಾವಿ ಇದ್ದು ಬೇಸಿಗೆಯ ಕಾಲದಲ್ಲಿ ಪ್ರತೀ ವರ್ಷವೂ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಹೀಗಾಗಿ ಒಂದು ಹೊಸ ಬಾವಿಯನ್ನು ನಿರ್ಮಿಸುವ ಯೋಚನೆಯನ್ನು ಮಾಡಿದ್ದು ಅದರಂತೆ ಕುಟುಂಬದ ಸದಸ್ಯರೇ ಸೇರಿಕೊಂಡು ಬಾವಿಯನ್ನು ನಿರ್ಮಿಸಿದ್ದೇವೆ ಎಂದು ಅಕ್ಷತಾ ಪೂಜಾರಿ ಮಾತು. ಇಷ್ಟು ದೊಡ್ಡ ಬಾವಿಯನ್ನು ನಿರ್ಮಿಸುವಲ್ಲಿ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಕೆಲಸಕ್ಕೆ ಕಾರ್ಮಿಕರು ಸಿಗಲಿಲ್ಲ ಹೀಗಾಗಿ ನಾವೇ ಮನೆ ಮಂದಿ ಸೇರಿ ಬಾವಿಯನ್ನು ತೋಡಿದ್ದೆವು. ಸಹೋದರಿಯ ಮಕ್ಕಳಾದ ಸುಶಾಂತ್, ಸುಜಿತ್, ಸಮಿತ್ ಕೂಡ ಕೆಲಸಕ್ಕೆ ನೆರವಾಗಿದ್ದಾರೆ.
ಮನೆಯಲ್ಲಿ ಕೂತು ಟಿವಿ, ಮೊಬೈಲ್ ನಲ್ಲಿ ಕಾಲಹರಣ ಮಾಡುವ ಮಂದಿಗೆ ಬೋಳ ಅಕ್ಷತಾ ಪೂಜಾರಿಯವರ ಕುಟುಂಬ ವಿಶೇಷವಾಗಿ ಮಾದರಿಯಾಗಿದೆ. ಲಾಕ್ ಡೌನ್ ನ ದಿನಗಳನ್ನು ವ್ಯರ್ಥ ಮಾಡದೆ ಬಾವಿಯನ್ನು ತೋಡಿದ ಸಾಧನೆಯನ್ನು ಮೆರೆದಿದ್ದಾರೆ. ಕುಟುಂಬದ ಸದಸ್ಯರು ಯಾರು ಕೆಲಸದ ಅನುಭವಿಗಳಲ್ಲ. ಆದರೂ ಮಕ್ಕಳಾಟಿಕೆಯಂತೆ ಬಾವಿಯನ್ನು ತೋಡಿದ್ದು ಅದಕ್ಕೆ ಫಲವಾಗಿ 25 ಅಡಿ ಆಳದಲ್ಲಿ ನೀರು ಚಿಮ್ಮಿದೆ. ಇದೀಗ ಮನೆ ಮಂದಿಗೆ ಸಂಭ್ರಮವಾಗಿದೆ.