ಉಡುಪಿ, ಏ 29 (Daijiworld News/MSP): ಲಾಕ್ ಡೌನ್ ಹಿನ್ನಲೆಯಲ್ಲಿ ಬೆಳಗಾವಿ ಬಳಿಕ ಇದೀಗ ಉಡುಪಿಯಲ್ಲಿಯೂ ಸೈನಿಕರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆದಿದ್ದು, ಎರಡು ಇಲಾಖೆಯವರು ತಮ್ಮ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಏನ್ ಸಿ ಸಿ ಮೈದಾನದಲ್ಲಿ ಸೈನಿಕರು ಗುಂಪುಗೂಡಿಕೊಂಡು ಕಬಡ್ಡಿ ಮತ್ತು ವಾಲಿಬಾಲ್ ಆಟವಾಡುತ್ತಿದ್ದರು. ಈ ವೇಳೆ ಅಲ್ಲಿಗೆ ತೆರಳಿದ ಉಡುಪಿ ಪೊಲೀಸರು ಲಾಕ್ ಡೌನ್ ನಿಯಮ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಅದನ್ನು ಪ್ರಶ್ನಿಸಿದರು. ಆದರೆ ಸೈನಿಕರು ತಾವು ಲಾಕ್ ಡೌನ್ ನಿಯಮ ಉಲ್ಲಂಘಿಸಿಲ್ಲ, ನಮ್ಮ ದೈಹಿಕ ಕ್ಷಮತೆಗಾಗಿ ಅಭ್ಯಾಸ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸೈನಿಕರ ವಾದವನ್ನು ಒಪ್ಪದ ಪೊಲೀಸರು ಲಾಕ್ ಡೌನ್ ನಿಯಮ ಸರ್ಕಾರದ ಆದೇಶ ಇದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು. ಈ ವಾದ ಒಪ್ಪದ ಸೈನಿಕರು, ನಮ್ಮ ಬೇಲಿ ದಾಟಿ ಒಳಗೆ ನೀವು ಯಾರೂ ಬರಕೂಡದು, ರಾಜ್ಯ ಸರಕಾರವಾಗಲಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆಗಾಗಲಿ ನಮ್ಮನ್ನು ಪ್ರಶ್ನಿಸುವ ಹಕ್ಕು ಇಲ್ಲ ಎಂದು ಹೇಳಿದರು. ಆ ಬಳಿಕ ಎರಡು ಇಲಾಖೆಯ ನಡುವೆ ಮಾತಿನ ಚಕಮಕಿ ನಡೆದುದ್ದು ಈ ಕುರಿತಾದ ವಿಡಿಯೋ ವೈರಲ್ ಆಗಿದ್ದು ತಿಂಗಳ ಹಿಂದೆ ನಡೆದ ಘಟನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಲಾಕ್ ಡೌನ್ ನಡುವೆ ಪೊಲೀಸರ ವರ್ಸಸ್ ಸೈನಿಕರ ನಡುವೆ ತಿಕ್ಕಾಟದ ಪ್ರಕರಣ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.