ಮಂಗಳೂರು, ಎ.29 (Daijiworld News/MB) : ಕೊರೊನಾ ಲಾಕ್ಡೌನ್ ಇರುವ ಕಾರಣದಿಂದಾಗಿ ದ.ಕ. ಜಿಲ್ಲಾಡಳಿತವು ಷರತ್ತು ಬದ್ಧವಾಗಿ ಬಂದರು ಧಕ್ಕೆ ಹೋರಾಂಗಣದಲ್ಲಿ ಮತ್ಸ್ಯೋಧ್ಯಮ ನಡೆಸಲು ಅನುಮತಿಸಿತ್ತು. ಆದರೆ ಹೊರ ಜಿಲ್ಲೆಯಿಂದ ಬರುವ ಮೀನಿ ಸಾಗಾಟದ ಲಾರಿಗಳು, ಕಾರ್ಮಿಕರು ಸೇರಿ ಜನಸಂದಣಿ ಅಧಿಕವಾದ ಕಾರಣದಿಂದಾಗಿ ಮೀನು ಮಾರಾಟವನ್ನು ಸಂಘವು ಸ್ಥಗಿತ ಮಾಡಿದೆ.
ಹೆಚ್ಚಿನ ಜನರು ಸೇರುವುದರಿಂದ ಸೋಂಕು ಹರಡುವುದನ್ನು ತಡೆಯಲ್ಲಿ ತೊಡಕು ಉಂಟಾಗುತ್ತದೆ ಎಂದು ಸಂಘ ಮಾರಾಟ ನಿಲ್ಲಿಸಲು ನಿರ್ಧರಿಸಿದ ಮೇರೆಗೆ ಜಿಲ್ಲಾಡಳಿತ ಮೀನು ಮಾರಾಟ ಸ್ಥಗಿತಗೊಳಿಸಿದೆ.
ಬಂದರು ಧಕ್ಕೆಯ ಹೊರಾಂಗಣವಾದ್ದರಿಂದ ಮೀನು ಖರೀದಿ ಮಾಡಲು ಹೆಚ್ಚು ಜನರು ಬರುವ ಕಾರಣದಿಂದಾಗಿ ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿ ಜನರನ್ನು ನಿಯಂತ್ರಣ ಮಾಡಲು ಕಷ್ಟವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಹಸಿ ಮೀನು ಮಾರಾಟಗಾರರು ಹಾಗೂ ಕಮಿಷನ್ ಏಜೆಂಟ್ ಸಂಘವು ವ್ಯಾಪಾರವನ್ನು ಸ್ಥಗಿತಗೊಳಿಸಿತ್ತು.
ಜನಸಂದಣಿ ಹೆಚ್ಚಾಗುವ ಕಾರಣ ಹಾಗೂ ಕೊರೊನಾ ಹರಡುವುದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೊರ ರಾಜ್ಯದ ಮೀನು ವಾಹನಕ್ಕೆ ಜಿಲ್ಲೆಗೆ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಮಾಡಿದೆ.
ಈ ಹಿಂದೆ ಹಸಿ ಮೀನು ಮಾರಾಟ ಸಂಘವು ಜಿಲ್ಲೆಯ ಉಸ್ತುವಾರಿ ಸಚಿವರ ಸಲಹೆಯಂತೆ ತಾವು ಅಪೇಕ್ಷಿಸಿದಂತೆ ಮಾರಾಟಕ್ಕೆ ಅನುವು ಮಾಡಿ ಕೊಟ್ಟಿತ್ತು. ಜನರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಸಹಕಾರ ನೀಡಿದ್ದರೂ ಕೂಡಾ ಜನರು ಗುಂಪು ಸೇರುವುದನ್ನು ನಿಯಂತ್ರಣ ಮಾಡಲು ಸಾಧ್ಯವಾಗದ ಕಾರಣ ಹಸಿ ಮೀನು ಮಾರಾಟ ಸಂಘವು ಸಭೆ ಸೇರಿ ಮಾರಾಟವನ್ನು ಸ್ಥಗಿತ ಮಾಡಲು ನಿರ್ಧಾರ ಮಾಡಿದೆ. ಹಾಗೆಯೇ ಜಿಲ್ಲೆಗೆ ಹೊರ ರಾಜ್ಯದ ಹಾಗೂ ಜಿಲ್ಲೆಗಳ ಮೀನು ಸಾಗಾಟ ಸಾರಿಗೆಯನ್ನು ಸ್ಥಗಿತ ಮಾಡಬೇಕೆಂದು ಮನವಿ ಮಾಡಿದೆ.
ಲಾಕ್ಡೌನ್ ಅವಧಿಯವರೆಗೂ ಮೀನು ಮಾರಾಟವನ್ನು ನಿಲ್ಲಿಸಲಾಗಿದ್ದು ಮುಂದೆ ನಿಯಮಕ್ಕೆ ಅನುಸಾರವಾಗಿ ಬಂದರು ಧಕ್ಕೆ ನಗರಪಾಲಿಕೆ ಮಾರುಕಟ್ಟೆಯಲ್ಲಿಯೇ ಸಂಘದ ವತಿಯಿಂದ ಮಾರಾಟ ಆರಂಭ ಮಾಡಲಾಗುತ್ತದೆ ಎಂದು ತೀರ್ಮಾನಿಸಲಾಗಿದೆ.
ಹಾಗೆಯೇ ಈ ಬಂದರು ಧಕ್ಕೆಯಲ್ಲಿ ಈ ಹಿಂದೆ ಮೀನು ಮಾರಾಟಕ್ಕೆ ಸಂಘ ಅಪೇಕ್ಷಿಸಿದಂತೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಪರ್ಯಾಯವಾಗಿ ವ್ಯವಸ್ಥೆ ಮಾಡಿ ಸಹಕಾರ ಮಾಡಿದಕ್ಕೆ ಸಂಘದ ಎಂ. ಮುಸ್ತಫಾರವರು ಧನ್ಯವಾದ ಸಲ್ಲಿಸಿದ್ದಾರೆ.