ಉಳ್ಳಾಲ, ಏ 29 (DaijiworldNews/SM): ಗಡಿ ಪ್ರದೇಶ ತಲಪಾಡಿಯಲ್ಲಿ ಕಳೆದ ಕೆಲವು ದಿನಗಳಿಂದ ಸಿಲುಕಿಕೊಂಡಿದ್ದ ಶಿಕಾರಿಪುರದ ಹದಿನಾರು ಮಂದಿ ಕಾರ್ಮಿಕರಿಗೆ ಸ್ವತಃ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೇ ತಮ್ಮ ಊರಿಗೆ ಕರೆದೊಯ್ಯುವ ವ್ಯವಸ್ಥೆ ಮಾಡುವ ಮೂಲಕ ದೈಜಿವರ್ಲ್ಡ್ ವಾಹಿನಿ ಬಿತ್ತರಿಸಿದ ವರದಿಗೆ ಬಿಗ್ ಇಂಪ್ಯಾಕ್ಟ್ ಸಿಕ್ಕಿದಂತಾಗಿದೆ.
ತಲಪಾಡಿಯಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು ಊರಿಗೆ ತೆರಳಲು ಅಳಲು ತೋಡಿಕೊಂಡಿದ್ದರು. ಇವರ ಪೈಕಿ ಗರ್ಭಿಣಿಯೂ ಸೇರಿಕೊಂಡಿದ್ದರು. ಅವರು ತಮ್ಮ ಊರಿಗೆ ತೆರಳಲು ವ್ಯವಸ್ಥೆ ಮಾಡಿಕೊಡಿ ಎಂಬುವುದಾಗಿ ಮನವಿ ಮಾಡಿಕೊಂಡಿದ್ದರು. ಇಲ್ಲದಿದ್ದರೆ ಸಾಮೂಹಿಕ ಆತ್ಮಹತ್ಯೆ ನಡೆಸಲು ನಿರ್ಧರಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ದೈಜಿವರ್ಲ್ಡ್ ವಾಹಿನಿ ಕಾರ್ಮಿಕರ ನೋವಿಗೆ ಸ್ಪಂಧಿಸಿದೆ. ಅವರನ್ನು ಊರಿಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದೆ.
ಅದರಂತೆ ದೈಜಿವರ್ಲ್ಡ್ ವಾಹಿನಿಯಲ್ಲಿ ತಕ್ಷಣವೇ ವಿಶೇಷ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಬಸವರಾಜ್ ಅವರನ್ನು ನೇರ ಸಂಪರ್ಕ ಮಾಡಲಾಗಿದ್ದು, ದೈಜಿವರ್ಲ್ಡ್ ವಾಹಿನಿ ಮಾಡಿಕೊಂಡ ಮನವಿಗೆ ಅವರು ತಕ್ಷಣಕ್ಕೆ ಸ್ಪಂದಿಸಿದ್ದಾರೆ. ಪರಿಣಾಮ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಗರ್ಭಿಣಿ ಸೇರಿದಂತೆ ಎಲ್ಲಾ ಕಾರ್ಮಿಕರನ್ನು ತವರು ಶಿಕಾರಿಪುರಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ.
ಘಟನೆಯ ವಿವರ:
ಲಾಕ್ ಡೌನ್ ಗಿಂತಲು ಮೊದಲು ರಾಜ್ಯದ ಶಿಕಾರಿಪುರದಿಂದ ಕೆಲಸ ಅರಸಿಕೊಂಡು ನೆರೆ ರಾಜ್ಯ ಕೇರಳದ ಮಂಜೇಶ್ವರಕ್ಕೆ ಸುಮಾರು ಹದಿನಾರು ಮಂದಿ ಆಗಮಿಸಿದ್ದರು. ಆದರೆ, ಈ ನಡುವೆ ಕೊರೊನಾ ಮಹಾಮಾರಿಯಿಂದಾಗಿ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದಾಗಿ, ಸಿಎಂ ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರದಿಂದ ಆಗಮಿಸಿದ್ದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಕೆಲಸವೂ ಇಲ್ಲದೇ ಹೊಟ್ಟೆ ತುಂಬಿಸಲೂ ಆಗದೆ ಇದ್ದ ಸಂದರ್ಭ ಗರ್ಭಿಣಿ ಸೇರಿದಂತೆ ಕಾರ್ಮಿಕರು ತವರಿನತ್ತ ಮುಖಮಾಡಿದ್ದರು. ಆದರೆ, ತಲಪಾಡಿ ಗಡಿದಾಟಲು ಅವರಿಂದ ಸಾಧ್ಯವೇ ಆಗಿಲ್ಲ. ಕಳೆದ ಇಪ್ಪತ್ತು ದಿನಗಳಿಂದ ತಲಪಾಡಿಯಲ್ಲೇ ಉಳಿದುಕೊಂಡಿದ್ದರು.
ತಲಪಾಡಿಯ ಶಾಲೆಯೊಂದರಲ್ಲಿ ಇವರಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಕಾರ್ಮಿಕರಿಗೆ ಹೊಟ್ಟೆ ತುಂಬಿಸುವುದೇ ಸವಾಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಮಿಕರಲ್ಲಿ ಮನ ಮಿಡಿದ ಸ್ಥಳೀಯ ಮುಖಂಡ, ಸಾಮಾಜಿಕ ಕಾರ್ಯಕರ್ತ ಸಿದ್ದಿಕ್ ತಲಪಾಡಿ ಪ್ರತಿನಿತ್ಯ ಕಾರ್ಮಿಕರಿಗೆ ಆಹಾರದ ವ್ಯವಸ್ಥೆಯನ್ನು ಮಾಡುತ್ತಿದ್ದರು. ಅಲ್ಲದೆ, ಅವರನ್ನು ಊರಿಗೆ ತಲುಪಿಸಲು ನಿರಂತರ ಪ್ರಯತ್ನಗಳನ್ನು ನಡೆಸಿದ್ದರು. ಈ ಬಗ್ಗೆ ದೈಜಿವರ್ಲ್ಡ್ ವಾಹಿನಿಗೆ ಮಾಹಿತಿ ನೀಡಿದ್ದರು.
ಅದರಂತೆ, ತಲಪಾಡಿಗೆ ತೆರಳಿದ ನಮ್ಮ ಪ್ರತಿನಿಧಿ ಮೋಹನ್ ಕುತ್ತಾರ್ ಅವರ ಬಳಿಯಲ್ಲಿ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಮ್ಮನ್ನು ಊರಿಗೆ ಕರೆದೊಯ್ಯಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಕಾರ್ಮಿಕರ ಜತೆಗಿದ್ದ ಗರ್ಭಿಣಿ ತಮ್ಮ ಕಣ್ಣೀರು ಸುರಿಸಿ ಬೇಡಿಕೊಂಡಿದ್ದರು. ಇಲ್ಲವಾದಲ್ಲಿ ಸಾಮೂಹಿಕ ಆತ್ಮಹತ್ಯೆ ನಡೆಸುವ ನಿರ್ಧಾರಕ್ಕೂ ಕಾರ್ಮಿಕರು ಬಂದಿದ್ದರು.
ಈ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ದೈಜಿವರ್ಲ್ಡ್ ವಾಹಿನಿ ಸಂಜೆ ಏಳು ಗಂಟೆಗೆ 'ಕಾರ್ಮಿಕರೊಂದಿಗೆ ನಾವಿದ್ದೇವೆ' ಎನ್ನುವ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಅವರ ಆಪ್ತ ಕಾರ್ಯದರ್ಶಿ ಬಸವರಾಜ್ ಅವರನ್ನು ನೇರವಾಗಿ ಸಂಪರ್ಕಿಸಿ ವಿಚಾರ ತಿಳಿಸಿ ಕಾರ್ಮಿಕರನ್ನು ಊರಿಗೆ ಕರೆದೊಯ್ಯಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಮಾತ್ರವಲ್ಲದೆ, ಕಾರ್ಮಿಕದ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ.
ನೇರಪ್ರಸಾರ ಕಾರ್ಯಕ್ರಮ ಮುಗಿಯುತ್ತಿದ್ದಂತೆ ದೈಜಿವರ್ಲ್ಡ್ ವಾಹಿನಿಗೆ ಸ್ವತಃ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಕರೆ ಮಾಡಿದ್ದಾರೆ. ಹಾಗೂ ಕಾರ್ಮಿಕರನ್ನು ತವರೂರಾದ ಶಿಕಾರಿಪುರಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದ್ದು, ರಾತ್ರಿಯೇ ಬಸ್ ಮೂಲಕ ಅವರನ್ನು ಶಿಕಾರಿಪುರಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪ ತಮಗೆ ಧನ್ಯವಾದಗಳು:
ಇನ್ನು ದೈಜಿವರ್ಲ್ಡ್ ವಾಹಿನಿ ಸಿಎಂ ಅವರ ಆಪ್ತ ಕಾರ್ಯದರ್ಶಿಯವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಿಎಂ ಹಾಗೂ ಅವರ ಜತೆಗಿರುವವರು ಸಂಕಷ್ಟದಲ್ಲಿ ತಲಪಾಡಿಯ ಗಡಿ ಭಾಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ತವರಿಗೆ ಕರೆದೊಯ್ಯಲು ಸಹಕಾರ ನೀಡಿದ್ದಾರೆ. ಅವರ ಶೀಘ್ರ ಸ್ಪಂದನೆಗೆ ನಮ್ಮ ವಾಹಿನಿ ಕೃತಜ್ಞತೆ ಸಲ್ಲಿಸುತ್ತದೆ.
ಇನ್ನು ಈ ಕಾರ್ಮಿಕರಿಗೆ ಪ್ರತಿನಿತ್ಯ ಆಹಾರವನ್ನು ಒದಗಿಸಿ ಅವರ ಬಗ್ಗೆ ಕಾಳಜಿ ವಹಿಸಿದ್ದ ತಲಪಾಡಿಯ ಸಾಮಾಜಿಕ ಕಾರ್ಯಕರ್ತ ಸಿದ್ದಿಕ್ ತಲಪಾಡಿಯವರ ಕಾರ್ಯಕ್ಕೂ ನಮ್ಮದೊಂದು ಸಲಾಂ.