ಕಿನ್ನಿಗೋಳಿ, ಏ 29 (DaijiworldNews/SM): ಕ್ಷುಲ್ಲಕ ಕಾರಣಕ್ಕಾಗಿ ದಂಪತಿಯನ್ನು ಹತ್ಯೆಗೈದ ಘಟನೆ ಕಿನ್ನಿಗೋಳಿಯ ದಾಮಸ್ಕಟ್ಟೆಯ ಏಳಿಂಜೆ ಎಂಬಲ್ಲಿ ನಡೆದಿದ್ದು, ಆರೋಪಿಯ ದುಷ್ಕೃತ್ಯದಿಂದಾಗಿ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಕಿನ್ನಿಗೋಳಿ ಪರಿಸರದಲ್ಲಿ ಬುಧವಾರ ಮುಂಜಾನೆಯೇ ಆಘಾತಕಾರಿ ಘಟನೆ ನಡೆದಿತ್ತು. ಸಿ.ಆರ್.ಪಿ.ಎಫ್. ನಿವೃತ್ತ ಯೋಧ ಹಾಗೂ ಅವರ ಪತ್ನಿಯನ್ನು ನೆರೆ ಮನೆಯ ಅಲ್ಫೋನ್ಸ್ ಎಂಬಾತ ಹಾರೆ, ಚೂರಿಯಿಂದ ಇರಿದು ಬರ್ಬರ ಹತ್ಯೆ ನಡೆಸಿದ್ದ. ಸಿ.ಆರ್.ಪಿ.ಎಫ್. ಮಾಜಿ ಸೈನಿಕ ವಿನ್ಸೆಂಟ್ ಡಿ'ಸೋಜಾ (48)ಹಾಗೂ ಅವರ ಪತ್ನಿ ಹೆಲೆನಾ ಡಿಸೋಜ(42) ಬರ್ಬರವಾಗಿ ಹತ್ಯೆಯಾದವರು. ಪತಿಯ ಮೇಲೆ ಹಲ್ಲೆ ನಡೆಯುತ್ತಿದ್ದಂತೆ ಅವರನ್ನು ರಕ್ಷಿಸಲು ಬಂದ ಪತ್ನಿಯ ಮೇಲೂ ಆರೋಪಿ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಇಬ್ಬರು ಇಹಲೋಕದ ಪಯಣ ಮುಗಿಸಿದ್ದಾರೆ.
ಕೊಲೆಗೆ ಕಾರಣವಾಯ್ತು ಮರದ ಗೆಲ್ಲು:
ಇನ್ನು ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಡಾ. ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಘಟನೆಯ ಕುರಿತಂತೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನು ಇದರ ಬೆನ್ನಲ್ಲೇ ಶಾಸಕ ಉಮಾನಾಥ ಕೊಟ್ಯಾನ್ ಸ್ಥಳಕ್ಕೆ ತೆರಳಿದ್ದು, ಕುಟುಂಬಸ್ಥರನ್ನು ಸಾಂತ್ವಾನಪಡಿಸಿದ್ದಾರೆ. ಅಲ್ಲದೆ, ಆಸುಪಾಸಿನ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಬಳಿಕ ದೈಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿರುವ ಅವರು, ಮರದ ರೆಂಬೆ ಕಡಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಮನಸ್ತಾಪದಿಂದಾಗಿ ಪರಸ್ಪರ ವಾದ ಪ್ರತಿವಾದ ಏರ್ಪಟ್ಟು ಕೊಲೆಯಲ್ಲಿ ಅಂತ್ಯಗೊಂಡಿರುವುದು ಬೇಸರದ ಸಂಗತಿಯಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಕಾರಣವಿಲ್ಲದೆ ಹತ್ಯೆ ನಡೆಸಿರುವುದು ಖೇದಕರ ಎಂದಿದ್ದಾರೆ.