ಮಂಗಳೂರು, ಏ 29 (DaijiworldNews/SM): ಕರಾವಳಿಯ ಶಾಸಕರಿಬ್ಬರ ಮಧ್ಯೆ ವಾಕ್ಸಮರ ನಡೆದ ಘಟನೆ ಬುಧವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ನಿಯಂತ್ರಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಭವಿಸಿದೆ.
ಸಭೆ ನಡೆಯುತ್ತಿದ್ದಂತೆ ಉಳ್ಳಾಲ ಶಾಸಕ ಯು.ಟಿ. ಖಾದರ್ ಅವರು ಇತ್ತೀಚೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯ ಮೃತದೇಹವನ್ನು ಹಿಡಿದುಕೊಂಡು ಬೀದಿ ಬೀದಿ ಅಲೆದಾಡುವಂತೆ ಬಿಜೆಪಿಯವರು ಮಾಡಿದ್ದಾರೆ ಎಂದು ಟೀಕಿಸಿದ್ದರು.
ಈ ವೇಳೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಪ್ರತಿಕ್ರಿಯೆ ನೀಡಿದ್ದಾರೆ. ಕೊರೊನಾದಿಂದ ಮೃತಪಟ್ಟ ಮಹಿಳೆಯ ಶವವನ್ನು ಊರೂರು ಅಲೆದಾಡಿಸಿಲ್ಲ. ಮಹಿಳೆಯ ಶವವು ಒಂದೇ ಕಡೆ ಇರಿಸಲಾಗಿತ್ತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ತಪ್ಪು ಮಾಹಿತಿ ನೀಡಲಾಗಿತ್ತು. ಈ ವಿಚಾರದ ಬಗ್ಗೆ ಅಪಪ್ರಚಾರ ಬೇಡ ಎಂದಿದ್ದಾರೆ.
ಈ ವೇಳೆ, ಶಾಸಕ ಯುಟಿ ಖಾದರ್ ಅವರು ಪ್ರತಿಕ್ರಿಯೆ ನೀಡಿದ್ದು, ಒಂದೇ ಕಡೆ ಎಂದರೆ ಎಲ್ಲಿ? ಶವ ನಿಮ್ಮ ಮನೆಯಲ್ಲಿತ್ತೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕಾಮತ್, ಮನೆಯ ವಿಚಾರ ಇಲ್ಲಿ ಬೇಡ, ಅದರ ಅವಶ್ಯಕತೆ ಇಲ್ಲ ಎಂದಿದ್ದಾರೆ. ಅಲ್ಲದೆ ಇತ್ತೀಚೆಗೆ ಇಟಲಿಯಿಂದ ಬಂದವರನ್ನು ನಮ್ಮ ಜಿಲ್ಲೆಗೆ ಕರೆತರುವ ಉದ್ದೇಶ ಏನಿದೆ? ಸರಕಾರದ ಆದೇಶವನ್ನು ಧಿಕ್ಕರಿಸಿ ತಮ್ಮ ಕಾರಿನಲ್ಲೇ ತಂದಿದ್ದೀರಿ ಇದು ಸರಿಯಲ್ಲ ಎಂದು ಖಾದರ್ ಅವರನ್ನು ಟೀಕಿಸಿದ್ದಾರೆ.
ಇವರಿಬ್ಬರು ಪರಸ್ಪರ ಏಕವಚನದಲ್ಲೇ ಮಾತಾಡಿಕೊಂಡಿದ್ದಾರೆ ಎಂಬುವುದು ವೀಡಿಯೋದಲ್ಲಿ ಬಹಿರಂಗವಾಗಿದೆ. ಇತ್ತೀಚೆಗಷ್ಟೇ, ಶಾಸಕ ಕಾಮತ್ ಮತ್ತು ಶಾಸಕ ಖಾದರ್ ಅವರು ಒಟ್ಟಿಗೆ ಸೇರಿ ಸಿಟಿ ರೌಂಡ್ ಹೊಡೆದು ಮಾದರಿಯಾಗಿದ್ದರು. ಆದರೆ, ಇದೀಗ ಇವರಿಬ್ಬರ ಮಧ್ಯೆ ಸಭೆಯೊಂದರಲ್ಲಿ ಬಹಿರಂಗವಾಗಿ ಏಕವಚನ ಬಳಕೆಯೊಂದಿಗೆ ವಾಕ್ಸಮರ ನಡೆದಿರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ನಾಗರಿಕ ಸಮಾಜ ಪ್ರಶ್ನೆ ಮಾಡುವಂತಾಗಿದೆ.