ಕಡಬ, ಎ.30 (Daijiworld News/MB) : ರಾಮಕುಂಜದ ವಿವಿಧೆಡೆ ಕೆಲವು ದಿನಗಳ ಹಿಂದೆ ಕಳವು ಮಾಡಿದ ಆರೋಪದಲ್ಲಿ ಪೊಲೀಸರು ಓರ್ವನನ್ನು ಬುಧವಾರ ರಾತ್ರಿ ಆತೂರು ಬಸ್ ನಿಲ್ದಾಣದಲ್ಲಿ ಬಂಧನ ಮಾಡಿದ್ದಾರೆ.
ಬಂಧಿತನನ್ನು ಬಂಟ್ವಾಳ ತಾಲೂಕು ಸಜಿಪನಡು ಪೆರುವಮನೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಉಮ್ಮರ್ ಫಾರೂಕ್ (27) ಎಂದು ತಿಳಿದು ಬಂದಿದೆ.
ಕಡಬ ಸಹಿತ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಒಟ್ಟು 16 ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಡಬ ಎಸ್.ಐ. ರುಕ್ಮ ನೇತೃತ್ವದ ತಂಡ ಬಂಧಿತನಿಂದ ಕಳ್ಳತನ ಮಾಡಲು ಬಳಕೆ ಮಾಡಿದ್ದ ರಾಡ್ ಸಹಿತವಾಗಿ ಕೆಲವು ಸಾಮಾಗ್ರಿಗಳನ್ನು ವಶ ಪಡೆಸಿಕೊಂಡಿದ್ದಾರೆ.
ರಾಮಕುಂಜದ ಎಸ್.ಬಿ.ಐ. ಗ್ರಾಹಕರ ಸೇವಾ ಕೇಂದ್ರ, ಮೊಬೈಲ್ ಅಂಗಡಿ, ಪಂಚಾಯತ್ ಹಾಗೂ ಕಾಲೇಜಿನ ಬೀಗ ಮುರಿದು ಕೆಲವು ದಿನಗಳ ಹಿಂದೆ ಕಳ್ಳತನ ನಡೆದಿತ್ತು. ಈ ಕಳ್ಳತನ ಈತ ಹಾಗೂ ಫಯಾನ್ ಎಂಬಾತ ನಡೆಸಿದ್ದರು.
ಈಗಾಗಲೇ ಕೊಣಾಜೆ ಪೊಲೀಸರರು ಫಯಾನ್ನ್ನು ಬಂಧನ ಮಾಡಿದ್ದು ಆತ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಉಮ್ಮರ್ ಫಾರೂಕ್ ವಿರುದ್ಧ ಕಡಬ ಠಾಣೆಯಲ್ಲಿ 4, ಉಪ್ಪಿನಂಗಡಿ ಠಾಣೆಯಲ್ಲಿ 2, ಬಂಟ್ವಾಳ ಠಾಣೆಯಲ್ಲಿ 3, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 2 ಮತ್ತು ಕೊಣಾಜೆ ಠಾಣೆಯಲ್ಲಿ 5 ಸಹಿತವಾಗಿ ಒಟ್ಟು 16 ಪ್ರಕರಣಗಳು ದಾಖಲಾಗಿದೆ.