ವಿಟ್ಲ, ಏ 30 (Daijiworld News/MSP): ಅಕ್ರಮವಾಗಿ ಪ್ರವೇಶ ಮಾಡಿದ್ದೂ ಅಲ್ಲದೆ, ಉದ್ದೇಶಪೂರ್ವಕವಾಗಿ ಅಡಿಕೆ ಹಾಗೂ ಬಾಳೆ ಗಿಡಗಳನ್ನು ಕಡಿದು ಕೃಷಿ ನಾಶ ಮಾಡುವ ಮೂಲಕ ಅಮಾನವೀಯತೆಯನ್ನು ತೋರಿಸಿದ ಘಟನೆ ವಿಟ್ಲ ಹೋಬಳಿಯ ಕೆದಿಲ ಗ್ರಾಮದ ಗಾಣದಕೊಟ್ಯದಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕೆದಿಲ ಗ್ರಾಮದ ಗಾಣದಕೊಟ್ಯ ನಿವಾಸಿ ಅಡಿಕೆ ಕೃಷಿಕ ಚಂದು ಮೂಲ್ಯ ಅವರಿಗೆ ಸೇರಿದ ಜಾಗದಲ್ಲಿ ಸುಮಾರು ೧.೨೦ಎಕರೆ ರಾಷ್ಟ್ರೀಯ ಹೆದ್ದಾರಿಯ ವಿಚಾರಕ್ಕಾಗಿ ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಈ ಬಳಿಕ ಉಳಿದ ಜಾಗ ಹಾಗೂ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಾಗದಲ್ಲಿ ಕೃಷಿ ಕಾರ್ಯ ಮಾಡಲು ಮುಂದಾಗಿದ್ದರು.
ಚಂದು ಮೂಲ್ಯ ಮತ್ತು ಅವರ ಸಹೋದರ ಡೊಂಬಯ್ಯ ಮೂಲ್ಯ ಅವರ ನಡುವೆ ಇರುವ ಜಾಗದ ತಕರಾರು ಉಚ್ಛ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದ್ದು, ಚಂದು ಮೂಲ್ಯ ಅವರ ಪರ ತೀರ್ಪು ಲಭ್ಯವಾಗಿತ್ತು. ಇದನ್ನೇ ದ್ವೇಷವಾಗಿಟ್ಟುಕೊಂಡು ಡೊಂಬಯ್ಯ ಅಣ್ಣನ ತೋಟದ ೧೫ ಅಡಿಕೆ ಮರ ಮತ್ತು ೭ ಬಾಳೆ ಸಸಿಗಳನ್ನು ಕಡಿದುಹಾಕಿದ್ದಾರೆ ಎನ್ನಲಾಗಿದೆ.
ತೋಟದಲ್ಲಿ ಗಿಡಗಳ ಮೇಲೆ ಡೊಂಬಯ್ಯ ಮೂಲ್ಯ ಆಯುಧಗಳಿಂದ ದಾಳಿ ನಡೆಸಿದ್ದಾರೆಂದು ಮಾಹಿತಿ ತಿಳಿದ ಚಂದು ಮೂಲ್ಯ ಮತ್ತು ಅವರ ಪುತ್ರ ನಿವೃತ್ತ ಸೈನಿಕ ಜನಾರ್ದನ ಕುಲಾಲ್ ಸ್ಥಳಕ್ಕೆ ಹೋಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸ್ಥಳ ತನಿಖೆ ನಡೆಸಿ ಪುತ್ತೂರು ನಗರ ಠಾಣೆಯ ಸಿಬ್ಬಂದಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಮಾರು ೪೦ ಸೆಂಟ್ಸ್ ಜಾಗದಲ್ಲಿ ಕೃಷಿ ಮಾಡಲಾಗುತ್ತಿದ್ದು, ಇದರಲ್ಲಿ ಒಂದು ಅಡಿಕೆ ಮತ್ತು ನಾಲ್ಕೈದು ಬಾಳೆ ಗಿಡಗಳು ಮಾತ್ರ ಧರೆಗುರುಳಿದೆ. ಉಳಿದ ಹಲವು ಗಿಡಗಳಿಗೆ ಆಯುಧದಿಂದ ಬಲವಾಗಿ ಕಡಿಯಲಾಗಿದೆ. ದಾಳಿಗೊಳಗಾದ ಅಷ್ಟೂ ಸಸಿಗಳು ಯಾವುದೇ ಕ್ಷಣದಲ್ಲಿಯೂ ಧರೆಗೆ ಉರುಳಬಹುದು ಅಥವಾ ಸತ್ತು ಹೋಗಬಹುದಾದ ರೀತಿಯಲ್ಲಿ ಉಳಿದುಕೊಂಡಿದೆ.