ಮಂಗಳೂರು, ಏ 30 (DaijiworldNews/SM): ದ.ಕ. ಜಿಲ್ಲೆಯ ಜನತೆಗೆ ಮತ್ತೆ ಆತಂಕದ ಸುದ್ದಿ ಎದುರಾಗಿದ್ದು, ಕೊರೊನಾ ಸೋಂಕಿಗೆ ದ.ಕ. ಜಿಲ್ಲೆಯಲ್ಲಿ ಮೂರನೇ ಬಲಿಯಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ಮಹಿಳೆ ಮೃತಪಟ್ಟಿದ್ದಾರೆ. ಆ ಮೂಲಕ ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಬಂಟ್ವಾಳ ಕಸಬಾ ಮೂಲದ ಮಹಿಳೆ ಮೃತಪಟ್ಟವರು. ಕಳೆದ ಕೆಲವು ದಿನಗಳಿಂದ ಈ ಮಹಿಳೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೆ, ನಿನ್ನೆಯಿಂದ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವೆಂಟಿಲೇಟರ್ ಅಳವಡಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾದ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ದ.ಕ. ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಬುಧವಾರದಂದು ಜಿಲ್ಲಾಡಳಿತ ನೀಡಿದ್ದ ವರದಿಯಲ್ಲಿ ಮಹಿಳೆಯ ಸ್ಥಿತಿ ಗಂಭೀರ ಎಂಬ ಮಾಹಿತಿ ಲಭ್ಯವಾಗಿತ್ತು. ಅಲ್ಲದೆ, ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಲಾಗಿತ್ತು. ಈ ಬಗ್ಗೆ ವೆನ್ಲಾಕ್ ಅಧಿಕ್ಷಕರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು. ಆದರೆ, ಆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರದಂದು ಮೃತಪಟ್ಟಿದ್ದಾರೆ.
ಬಂಟ್ವಾಳ ಪೇಟೆಯ ಮೂರನೇ ಮಹಿಳೆ ಮೃತ್ಯು:
ಈಗಾಗಲೇ ಬಂಟ್ವಾಳ ಕಸಬ ನಿವಾಸಿಗಳು ಒಂದೇ ಮನೆಯ ಇಬ್ಬರು ಮಹಿಳೆಯರು ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಅವರ ನೆರೆ ಮನೆಯ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ತಾಯಿ ಮಗಳಲ್ಲಿ ಸೋಂಕು ಪತ್ತೆಯಾಗಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲು ತಾಯಿಯಲ್ಲಿ ಸೋಂಕು ದೃಢಪಟ್ಟರೆ ಬಳಿಕ ಮಗಳಲ್ಲಿ ಸೋಂಕು ಪತ್ತೆಯಾಗಿತ್ತು.
ಅದರೆ, ಇದೀಗ ಮಹಿಳೆ 67 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಮಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ವಿಪರ್ಯಾಸವೆಂದರೆ, ಇಲ್ಲಿಯ ತನಕ ದ.ಕ. ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರು ಬಂಟ್ವಾಳ ಪೇಟೆಯವರೇ ಆಗಿದ್ದಾರೆ. ಈ ಪೈಕಿ ಒಂದೇ ಮನೆಯ ಅತ್ತೆ ಸೊಸೆ ಈಗಾಗಲೇ ಮೃತಪಟ್ಟಿದ್ದು, ಇದೀಗ ನೆರೆ ಮನೆಯ ಮಹಿಳೆ ಮೃತಪಡುವ ಮೂಲಕ ಜನತೆಯಲ್ಲಿ ಆತಂಕ ಎದುರಾಗಿದೆ.