ಉಳ್ಳಾಲ, ಏ 30 (DaijiworldNews/SM): ಮೂರು ವರ್ಷದಿಂದ ನಿರಂತರವಾಗಿ ಸಂತ ಆಗ್ನೇಸ್ ವಿದ್ಯಾರ್ಥಿಗಳು ಮೂರು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪಾಳುಬಿದ್ದ ಗದ್ದೆಗಳಲ್ಲಿ ಕೃಷಿ ಕಾರ್ಯ ನಡೆಸುವ ಮುಖೇನ ಗ್ರಾಮಸ್ಥರ ನೆರವಿಗೆ ನಿಂತ ಆಗ್ನೇಸ್ ತಂಡ ಇದೀಗ ಕೋವಿಡ್-19 ಸಂಕಷ್ಟಕ್ಕೆ ಒಳಗಾದವರಿಗೆ ಸ್ಪಂಧಿಸಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಹೇಳಿದರು.
ಅವರು ಸಮುದಾಯದತ್ತ ಆಗ್ನೇಸ್ ಕಾಲೇಜು ವತಿಯಿಂದ ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುನ್ನೂರು, ಅಂಬ್ಲಮೊಗರು, ಹರೇಕಳ ಗ್ರಾಮದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ನೀಡಲಾದ ಕಿಟ್ ಅನ್ನು ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲ ಕಟ್ಟಡದಲ್ಲಿ ಬುಧವಾರ ವಿತರಿಸಿ ಮಾತನಾಡಿದರು.
ಕೋವಿಡ್-19 ಕಾರ್ಯಾಚರಣೆಯಲ್ಲಿ ಆಶಾ ಕಾರ್ಯಕರ್ತೆ ಯರು, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ. ಸಮಾಜ ಸೇವೆಯ ಉದ್ದೇಶ ಇಟ್ಟುಕೊಂಡು ಸಂತ ಆಗ್ನೇಸ್ ಸಮುದಾಯದತ್ತ ಕಾಲೇಜು ಗ್ರಾಮಗಳ ಪಾಳುಬಿದ್ದ ಗದ್ದೆಗೆ ಜೀವ ಕೊಟ್ಟವರು. ಇದೀಗ ಅದೇ ಗ್ರಾಮದ ನೆರವಿಗೆ ನಿಂತಿರುವುದು ಕಾಲೇಜು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ. ಮೂರು ಗ್ರಾಮಗಳಿಗೆ ಕೇಂದ್ರ ಸರಕಾರದ ಉನ್ನತ್ ಭಾರತ್ ಅಭಿಯಾನ್ ಅನುದಾನ ಕೇಂದ್ರದಿಂದ ಬರಲಿದೆ. ಲಾಕ್ ಡೌನ್ ಅಚಾತುರ್ಯದಿಂದ ಸರಕಾರದ ಆದೇಶಗಳನ್ನು ಪಾಲಿಸಿ ಜನ ಮುಂದಯವರಿಯಿರಿ. ಶಂಕಿತರು ಹಾಗೂ ಸೋಂಕಿತರಿಗೆ ಮಾನಸಿಕ ಹಿಂಸೆ ನೀಡದಿರಿ ಎಂದರು.
ಸಂತ ಆಗ್ನೇಸ್ ಕಾಲೇಜು, ಮಂಗಳೂರು ಇಲ್ಲಿನ ಉಪಪ್ರಾಂಶುಪಾಲೆ ಸಿಸ್ಟರ್ ರೂಪಾ ಮಾತನಾಡಿ, ಕೋವಿಡ್ ಸೋಂಕಿತರ ಸಂಖ್ಯೆಗಳನ್ನು ನೋಡಿದಾಗ ಭಯ ಹೆಚ್ಚಾಗುತ್ತಿವೆ .ಸಾವು ಬೇಸರ ಕೊಟ್ಟಿದೆ .ಜತೆಗೆ ಹಲವರನ್ನು ನಿರಾಶ್ರಿತರನ್ನಾಗಿಯೂ ಮಾಡಿದೆ. ಈ ನಿಟ್ಟಿನಲ್ಲಿ ಜಾತಿ ಧರ್ಮ ನೋಡದೆ ಮಾನವೀಯತೆ ತೋರಿಸಲು ಕೊಟ್ಟ ಅವಕಾಶ ಎಂದು ಆಗ್ನೇಸ್ ಸಂಸ್ಥೆ ಕಾರ್ಯಾಚರಿಸಿದೆ ಎಂದರು.
ಈ ಸಂದರ್ಭ ಮುನ್ನೂರು ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ಹರೇಕಳ ಗ್ರಾ.ಪಂ ಅಧ್ಯಕ್ಷೆ ಅನಿತಾ ಡಿಸೋಜ, ಸಿಸ್ಟರ್ ಗಳಾದ ಇವೇಟ್, ಡೆಲ್ಫಿನ್ ಹಾಗೂ ಉಪನ್ಯಾಸಕ ಡೇಲನ್ ಉಪಸ್ಥಿತರಿದ್ದರು. ಸುನಿತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಮೂರು ಗ್ರಾಮಗಳಿಗೆ ನೀಡಲಾದ 500 ಕಿಟ್ ಗಳಲ್ಲಿ ಜಿಲ್ಲಾ ಆರೋಗ್ಯ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ , ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲಾಯಿತು.