ಮಂಗಳೂರು, ಮೇ 1 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಕರಣಗಳ ಹೆಚ್ಚಳದಿಂದ ಆರೆಂಜ್ ಝೋನ್ ನಲ್ಲಿದ್ದ ಜಿಲ್ಲೆ ಮತ್ತೆ ರೆಡ್ ಝೋನ್ ಗೆ ಸೇರ್ಪಡೆಯಾಗಿದೆ. ಇನ್ನು ಜಿಲ್ಲೆಯಲ್ಲಿ ಪತ್ತೆಯಾದ 16 ಕೊರೊನಾ ಸೋಂಕಿತರ ಪೈಕಿ ಎಂಟು ಮಂದಿಯು ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯೊಂದಿಗೆ ನಂಟು ಹೊಂದಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಏ.23ರಂದು ಸಾವನ್ನಪ್ಪಿರುವ ಬಂಟ್ವಾಳದ ಕಸಬಾದ ವೃದ್ದೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಾಗಿದ್ದರು. ಆ ವೃದ್ಧೆಯ ಸೊಸೆ ಏ.19 ರಂದು ಮೃತಪಟ್ಟಿದ್ದು. ಅತ್ತೆಯ ಉಪಚಾರ ಹಿನ್ನಲೆಯಲ್ಲಿ ಅದೇ ಆಸ್ಪತ್ರೆಗೆ ಬಂದು ಹೋಗುತ್ತಿದ್ದರು. ಏ.30 ರಂದು ನಿಧನರಾದ ಕಸಬಾದ ಇನ್ನೋರ್ವ ವೃದ್ಧೆ ಈ ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದಾರೆ, ಈ ವೃದ್ದೆಯ ಪುತ್ರಿಯೂ ಕೊರೊನಾ ಪಾಸಿಟಿವ್ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಕೊರೊನಾ ಫಾಸಿಟಿವ್ ಬಂದ ಶಕ್ತಿನಗರದ ವೃದ್ಧೆಯೂ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಮತ್ತು ಅವರ ಪುತ್ರ ಅದೇ ಆಸ್ಪತ್ರೆಯಲ್ಲಿ ತಾಯಿಯ ಸಹಾಯಕ್ಕಿದ್ದವರು. ಕೊರೊನಾ ದೃಢಪಟ್ಟ ಪಾಣೆಮಂಗಳೂರಿನ ಮಹಿಳೆ ಕೂಡಾ ಅದೇ ಆಸ್ಪತ್ರೆಯಲ್ಲಿ ಸಹಾಯಕ್ಕಿದ್ದವರು. ಇನ್ನು ಗುರುವಾರ ಕೊರೊನಾ ಧೃಢಪಟ್ಟ ಪಾಣೆಮಂಗಳೂರಿನ ಬೇಳೂರಿನ ಮಹಿಳೆಯು ಕಳೆದ ಒಂದು ವಾರದ ಹಿಂದಷ್ಟೇ ಅಲ್ಲಿಂದ ಚಿಕಿತ್ಸೆ ಪಡೆದು ಬಿಡುಗಡೆಗೊಂಡವರು.
ಒಟ್ಟಾರೆ ಎಂಟು ಪ್ರಕರಣಗಳಲ್ಲ್ ಫಸ್ಟ್ ನ್ಯೂರೋ ಆಸ್ಪತ್ರೆಯ ಹೆಸರು ಕೇಳಿಬಂದಿದ್ದರೂ, ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗುತ್ತಿರುವುದಕ್ಕೆ ಮೂಲ ಯಾವುದು ಎಂಬುದು ಇನ್ನು ಕೂಡಾ ನಿಗೂಢವಾಗಿಯೇ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ. ಅತ್ತ ಸಂಬಂಧಪಟ್ಟವರೂ ಸರಣಿ ಸೋಂಕಿನ ಪ್ರಕರಣಗಳ ಮೂಲ ಪತ್ತೆ ಅಥವಾ ಆ ಬಗ್ಗೆ ತನಿಖೆ ಮುಂದಾಗದಿರುವುದು ಅನುಮಾನಕ್ಕೆ ಎಡೆಮಾಡಿದೆ.