ಬ್ರಹ್ಮಾವರ, ಮೇ 1 (Daijiworld News/MSP): ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ದೇಶ ಲಾಕ್ ಡಾನ್ ಆದ್ದರಿಂದ ರೈತರು ಬೆಳೆದ ಬೆಳೆಯನ್ನು ಮಾರಕಟ್ಟೆ ಮಾಡಲಾಗದೆ ಆತಂಕಗೊಳಗಾಗಿರುವ ರೈತರಿಗೆ ಧೈರ್ಯ ತುಂಬುವ ಕೆಲಸದ ಜೊತೆಗೆ ಬೇರೆ ಬೇರೆ ಮೂಲಗಳಿಂದ ಮಾರುಕಟ್ಟೆಯ ಸಂಪರ್ಕವನ್ನು ಕಲ್ಪಿಸಿಕೊಡುವ ಕೆಲಸವನ್ನು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರ ವತಿಯಿಂದ ಮಾಡಲಾಗುತ್ತಿದೆ.
ಈ ರೀತಿಯಾಗಿ ಸಾಮಾಜಿಕ ಜಾಲತಾಣದ ಮುಖಾಂತರ ರೈತ ತನ್ನ ಜಮೀನಿನಲ್ಲಿ ನೇರ ಬಳಕೆದಾರರಿಗೆ ಮಾರಟ ಮಾಡುವ ಹಾಗೆ ಕಲ್ಪಿಸಿ ಕೊಟ್ಟದ್ದಕ್ಕೆ ಉದಾಹರಣೆ ಶ್ರೀ ಸುರೇಶ್ ನಾಯಕ್ ರವರದ್ದು. ಇವರು ತಮ್ಮ ಜಮೀನಿನಲ್ಲಿ ಬೆಳೆದ ಕಲ್ಲಂಗಡಿ ಹನ್ಣನ್ನು ಸೂಕ್ತ ಮಾರುಕಟ್ಟೆ ಸಿಕ್ಕದೆ ಕಂಗಾಲಾಗಿದ್ದಾಗ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಸಾಮಾಜಿಕ ಜಾಲತಾಣದಲ್ಲಿ ಇವರು ಬೆಳೆದಂತಹ ಬೆಳೆಯ ಬಗ್ಗೆ ವಿವರ ನೀಡಿ ಮಾಹಿತಿಯನ್ನು ಹರಿ ಬಿಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರೈತರು ಮತ್ತು ಉಡುಪಿ ನಗರವಾಸಿಗಳು ನೇರವಾಗಿ ಸುರೇಶ್ ನಾಯಕ್ ಇವರ ಜಮೀನಿನಲ್ಲಿ ಖರೀದಿ ಮಾಡಿದರು. ಇದುವರೆಗೆ ಸುಮಾರು 200 ಟನ್ ಕಲ್ಲಂಗಡಿ ಹಣ್ಣಿನ ಜೊತೆಗೆ ಬೇರೆ ಬೇರೆ ತರಕಾರಿ, ಹಣ್ಣುಗಳನ್ನು ಬೇರೆ ಜಿಲ್ಲೆಯ ರೈತರಿಂದ ಖರೀದಿಸಿ ಹೋಲ್ ಸೇಲ್ ದರದಲ್ಲಿ ಮಾರಾಟ ಮಾಡಿರುತ್ತಾರೆ.
ಈ ರೀತಿಯಾಗಿ ಕೃಷಿ ವಿಜ್ಞಾನ ಕೇಂದ್ರದ ನೇರವಿನಿಂದ ಸೃಷ್ಠಿಯಾದ ಮಾರುಕಟ್ಟೆಯಿಂದ ಇತರ ಜಿಲ್ಲೆಯ ರೈತರಿಗೆ ನೆರವು ನೀಡಿದ್ದಾರೆ. ಈ ರೀತಿಯಾಗಿ ನೆರವನ್ನು ಚಿತ್ರದುರ್ಗ ಜಿಲ್ಲೆಯ ಕಾಟನಾಯಕನ ಹಳ್ಳಿಯ ರೈತ ಮಹಿಳೆ ವಸಂತಕುಮಾರಿ ಯವರಿಗೂ ಇವರೂ ನೀಡಿದ್ದಾರೆ. ವಸಂತ ಕುಮಾರಿಯವರು ಬೆಳೆದ 10 ಟನ್ ಈರುಳ್ಳಿ ಬೆಳೆಯನ್ನು ಮಾರಲಾಗದೆ ಕಂಗಾಲಾಗಿ, ತನ್ನ ಅಳಲನ್ನು ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಾಗ, ಸಮಸ್ಯೆಯನ್ನು ಅರಿತ ಚಿತ್ರದುರ್ಗದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿದಾಗ, ಸುರೇಶ್ ನಾಯಕ್ ಇವರನ್ನು ಖರೀದಿ ಮಾಡುವಂತೆ ಕೇಳಿ ಕೊಳ್ಳಲಾಯಿತು. ಇದಕ್ಕೆ ಒಪ್ಪಿದ ಇವರು, 10ಟನ್ ಈರುಳ್ಳಿ ಖರೀದಿಸಿ ಸಂಕಷ್ಟದಲ್ಲಿ ಇದ್ದ ರೈತ ಮಹಿಳೆಗೆ ನೆರವು ನೀಡಿರುತ್ತಾರೆ. ಕೃಷಿ ವಿಜ್ಞಾನ ಕೇಂದ್ರದ ಮನವಿಗೆ ಸ್ಪಂದಿಸಿ ಕೋವಿಡ್-19 ರ ಮಹಾಮಾರಿಯಿಂದ ಮಾರುಕಟ್ಟೆ ಇಲ್ಲದ ಸಮಯದಲ್ಲಿ 10 ಟನ್ ಈರುಳ್ಳಿ ಖರೀದಿಸಿ ಮಾನವೀಯತೆ ಮೆರೆದಿರುತ್ತಾರೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.