ಬೆಳ್ತಂಗಡಿ, ಮೇ 01 (DaijiworldNews/SM): ವೇಣೂರು ಸಮೀಪದ ಮೂಡುಕೋಡಿ ಗ್ರಾಮ ನಡ್ತಿಕಲ್ಲು ದಡೇಲು ಎಂಬಲ್ಲಿ ಫಲ್ಗುಣಿ ನದಿಗೆ ದುಷ್ಕರ್ಮಿಗಳು ವಿಷ ಬೆರೆಸಿರುವ ಪರಿಣಾಮ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ.
ಶುಕ್ರವಾರ ಸ್ಥಳೀಯರು ಗಮನಿಸಿದಾಗ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿದ್ದವು. ದುರ್ವಾಸನೆಯಿಂದ ಆ ಪರಿಸರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದ್ದು ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಸುತ್ತಮುತ್ತಲಿನ ಪ್ರದೇಶದ ಜನ ಭಯ ಭೀತರಾಗಿದ್ದಾರೆ.
ಪ್ರಾಣಿ ಪಕ್ಷಗಳು ಈ ವಿಷಯುಕ್ತ ನೀರನ್ನೇ ಕುಡಿಯುತ್ತಿದ್ದು, ಅವುಗಳ ಪ್ರಾಣಕ್ಕೂ ಸಂಚಕಾರ ಬಂದೊದಗಿದೆ. ಅದೇ ರೀತಿ ಹಕ್ಕಿಗಳು ಸತ್ತು ಬಿದ್ದಿರುವ ವಿಷಯುಕ್ತ ಮೀನುಗಳನ್ನು ತಿನ್ನುತ್ತಿವೆ. ಈ ಬಗ್ಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ದುಷ್ಜೃತ್ಯ ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಇಲ್ಲವಾದಲ್ಲಿ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ವಿಚಾರವನ್ನು ಶಾಸಕ ಹರೀಶ ಪೂಂಜಾ ಅವರ ಗಮನಕ್ಕೆ ತರಲಾಗಿದೆ.