ಮಂಗಳೂರು, ಮೇ 2 (Daijiworld News/MSP): ದಾಯ್ಜಿವಲ್ಡ್ ನಿಯತಕಾಲಿಕೆಯ ಸಂಪಾದಕೀಯ ವಿಭಾಗದ ಸಂಯೋಜಕರಾದ ಅನ್ನಾ ಮಸ್ಕರೇನ್ಹಸ್ (55) ಮೇ 2 ರ ಶನಿವಾರ ಮಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ದಾಯ್ಜಿವಲ್ಡ್ ಮ್ಯಾಗಜೀನ್ ನ ಪ್ರಧಾನ ಸಂಪಾದಕ ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚಾರ್ಯ) ಅವರ ಪತ್ನಿ ಅನ್ನಾ ಅವರು ಕಳೆದ ಮೂರು ವರ್ಷಗಳಿಂದ ಕ್ಯಾನ್ಸರ್ ವಿರುದ್ದ ಹೋರಾಡುತ್ತಿದ್ದರು.
ಪುತ್ರ ಇಯಾನ್ ಮಸ್ಕರೇನ್ಹಸ್ ಅವರೊಂದಿಗೆ ಅನ್ನಾ ಮಸ್ಕರೇನ್ಹಸ್
ಅನ್ನಾ ಅವರಿಗೆ ಮೊದಲ ಬಾರಿಗೆ 2017 ರ ಜನವರಿಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಇದಾದ ಆರೇ ತಿಂಗಳಲ್ಲಿ ಅವರು ಚೇತರಿಸಿಕೊಂಡರೂ, ಡಿಸೆಂಬರ್ 23, 2017 ರಲ್ಲಿ ಸಂಭವಿಸಿದ ಅಪಘಾತದಲ್ಲಿ ತಮ್ಮ ಪುತ್ರ ಇಯಾನ್ ಮಸ್ಕರೇನ್ಹಸ್ (28) ರನ್ನು ಕಳೆದುಕೊಳ್ಳಬೇಕಾಯಿತು. ಇದು ಅನ್ನಾ ಹಾಗೂ ಾವರ ಕುಟುಂಬನ್ನೇ ಅಘಾತಕ್ಕೆ ನೂಕಿತು. ಮಗನ ಸಾವಿನ ಅಸಹನೀಯ ದುಃಖದೊಂದಿಗೆ ಇವರಿಗೆ ಮತ್ತೆ 2018 ರ ಆರಂಭದಲ್ಲಿ ಕ್ಯಾನ್ಸರ್ ಮರುಕಳಿಸಿತು. ಆದರೆ ಸದಾ ಸಕಾರಾತ್ಮಕವಾಗಿರುತ್ತಿದ್ದ ಅವರ ಆರೋಗ್ಯ ಹದಗೆಡುತ್ತಿದ್ದರೂ, ಧೈರ್ಯಶಾಲಿಯಾಗಿ ಕ್ಯಾನ್ಸರ್ ವಿರುದ್ದದ ಹೋರಾಟ ನಡೆಸುತ್ತಿದ್ದರು.
ದಾಯ್ಜಿವರ್ಲ್ಡ್ ನಿಯತಕಾಲಿಕದ ಸಂಪಾದಕೀಯ ಸಂಯೋಜಕರಾಗಿ ತಮ್ಮ ಸೇವೆ ಸಲ್ಲಿಸಿರುವ ಅನ್ನಾ ಅವರು ತಮ್ಮ ಲೇಖನ, ಪಾಕಶಾಸ್ತ್ರದ ಅಂಕಣಗಳು, ಇತ್ಯಾದಿಗಳ ಮೂಲಕ ದಾಯ್ಜಿವಲ್ಡ್ ಸಮೂಹ ಸಂಸ್ಥೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಮಂಗಳೂರಿನಲ್ಲಿ ನೆಲೆಸುವ ಮೊದಲು ಪತಿ ಸ್ಟೀಫನ್, ಮಗ ಇಯಾನ್ ಮತ್ತು ಮಗಳು ಇನಾ ಅವರೊಂದಿಗೆ ಒಮನ್ ಮತ್ತು ಯುಎಇಯಲ್ಲಿ ಹಲವಾರು ವರ್ಷಗಳ ಕಾಲ ನೆಲೆಸಿದ್ದರು.
ತಮ್ಮ ಸಾವಿನಲ್ಲೂ, ಫಾದರ್ ಮುಲ್ಲರ್ ಆಸ್ಪತ್ರೆಗೆ ವೈದ್ಯಕೀಯ ಸಂಶೋಧನೆಗಾಗಿ ತಮ್ಮ ದೇಹವನ್ನು ದಾನ ಮಾಡುವ ಇಚ್ಚೆ ವ್ಯಕ್ತಪಡಿಸುವ ಮೂಲಕ ಇವರು ಮಾನವೀಯತೆಯನ್ನು ಮೆರೆದಿದ್ದಾರೆ. ಲಾಕ್ಡೌನ್ ಕಾರಣದಿಂದಾಗಿ ನಿರ್ಬಂಧದ ಕಾರಣ, ಆಡಳಿತವು ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಅವಳ ಅಂತ್ಯಕ್ರಿಯೆಯ ಸಮಾರಂಭವನ್ನು ಕಟ್ಟುನಿಟ್ಟಾಗಿ ನಡೆಸಲಾಯಿತು. ಲಾಕ್ಡೌನ್ ಮುಕ್ತಾಯದ ಬಳಿಕ ನಂತರ ಥ್ಯಾಂಕ್ಸ್ ಗಿವಿಂಗ್ ಮಾಸ್ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ದಾಯ್ಜಿವಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ನೇತೃತ್ವದ ದಾಯ್ಜಿವರ್ಲ್ಡ್ ಗ್ರೂಪ್ ಆಫ್ ಮೀಡಿಯಾದ ಎಲ್ಲಾ ನಿರ್ದೇಶಕರು, ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಅನ್ನಾ ಮಸ್ಕರೆನ್ಹಾಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.