ಮಂಗಳೂರು, ಮೇ 2 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾದಿಂದ ಮೃತಪಟ್ಟವ ಮೂವರಲ್ಲಿ ಇಬ್ಬರು ನಗರದ ಪಡೀಲ ಫಸ್ಟ್ ನ್ಯೂರೋದ ನೇರ ಸಂಪರ್ಕಕ್ಕೆ ಬಂದಿದ್ದರೆ ಮತ್ತೊಬ್ಬರು ದ್ವಿತೀಯ ಸಂಪರ್ಕಕ್ಕೆ ಬಂದಿದ್ದರು. ಇದಲ್ಲದೆ ಈಗಿರುವ ಸೋಂಕಿತರ ಪೈಕಿ ಎಂಟು ಮಂದಿಯು ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯೊಂದಿಗೆ ನೇರ ಸಂಪರ್ಕ ಹೊಂದಿದ್ದರು.
ಜಿಲ್ಲೆಯಲ್ಲಿ ಕೊರೊನಾದಿಂದ ಮೊದಲ ಸಾವು ಸಂಭವಿಸಿ 12 ದಿನ ಕಳೆದರೂ ಸೋಂಕು ಎಲ್ಲಿಂದ ತಗುಲಿತು ಎನ್ನುವುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಗಾಗಲಿ, ಜಿಲ್ಲಾಡಳಿತಕ್ಕಾಗಲಿ ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಫಸ್ಟ್ ನ್ಯೂರೋ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದವರ ವಿವರ ಕಲೆ ಹಾಕಿ ವಿಚಾರಣೆ ನಡೆಸಲಾಗುತ್ತಿದೆ, ಕೇರಳದಿಂದ ಸೋಂಕು ಹರಡಿರಬಹುದೇ ಎಂಬ ಅನುಮಾನದಲ್ಲಿ ಅಲ್ಲಿಂದ ಬಂದಿದ್ದ ರೋಗಿ ಹಾಗೂ ಸಂಬಂಧಿಕರ ವಿಚಾರಣೆಯನ್ನು ನಡೆಸಲಾಗಿದೆ ಆದರೆ ಪ್ರಾಥಮಿಕ ತನಿಖೆಯಿಂದ ಯಾವುದೇ ಸುಳಿವು ಲಭ್ಯವಾಗಿಲ್ಲ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಚಂದ್ರ ಬಾಯರಿ.
ಆದರೆ ಗಮನಾರ್ಹ ಅಂಶವೆಂದರೆ, ಬಂಟ್ವಾಳ ದಲ್ಲಿ ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡಿದ್ದರು ಎಂಬ ಕಾರಣಕ್ಕೆ ಅಲ್ಲಿನ ಸ್ಥಳೀಯ ವೈದ್ಯರೊಬ್ಬರ ಮೇಲೆ ಪ್ರಕರಣ ವರದಿಯಾದ ಮರುದಿನವೇ ಪ್ರಕರಣ ದಾಖಲಿಸಲಾಗಿತ್ತು. ಇನ್ನು ಸುರತ್ಕಲ್ ನಲ್ಲಿ ಕ್ಲಿನಿಕ್ ಒಂದರ ಪರವಾನಿಗೆ ನವೀಕರಣ ಬಾಕಿಯಾಗಿದೆ ಎಂದು ಆರೋಗ್ಯ ಇಲಾಖೆ ಬೀಗ ಜಡಿದಿತ್ತು. ಇಷ್ಟು ಕಟ್ಟುನಿಟ್ಟಾಗಿ ವರ್ತಿಸಿದ ಆರೋಗ್ಯ ಇಲಾಖೆ , ಇದೀಗ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳಕ್ಕೆ ಕಾರಣ ಪಡೀಲಿನ ಆಸ್ಪತ್ರೆಯ ವಿರುದ್ದ ಕ್ರಮ ಯಾಕೆ ಕೈಗೊಂಡಿಲ್ಲ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ಫಸ್ಟ್ ನ್ಯೂರೊದಲ್ಲಿ ಕೋವಿಡ್ ಸೋಂಕು ಪ್ರಕರಣ ಬೆಳಕಿಗೆ ಬಂದು ಇಷ್ಟು ದಿನ ಕಳೆದಿದ್ದರೂ ಆ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಿ ಅದರ ವ್ಯವಸ್ಥಾಪಕ ನಿರ್ದೇಶಕರನ್ನೇ ಅಲ್ಲಿನ ನೋಡಲ್ ಅಧಿಕಾರಿಯನ್ನಾಗಿ ನೇಮಕಗೊಳಿಸಿ ರುವುದು ಬಿಟ್ಟರೆ ಅಲ್ಲಿಗೆ ಸೋಂಕು ಎಲ್ಲಿಂದ ಹರಡಿರಬಹುದು ಎನ್ನುವತ್ತ ತನಿಖೆಯನ್ನು ತೀವ್ರಗೊಳಿಸಿಲ್ಲ, ಕ್ರಮವನ್ನು ಕೈಗೊಂಡಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.