ಮಲ್ಪೆ, ಮೇ 02 (Daijiworld News/MB) : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ನಿಯಮಗಳನ್ನು ನಾವು ಕಡ್ಡಾಯವಾಗಿ ಪಾಲನೆ ಮಾಡುತ್ತೇವೆ, ನಮಗೆ ಯಾಂತ್ರೀಕೃತ ಮೀನುಗಾರಿಕೆ ನಡೆಸಲು ಕೂಡಾ ಅವಕಾಶ ನೀಡಿ ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರನ್ನು ಭೇಟಿಯಾಗಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಬಂದರಿನಲ್ಲಿ ಸಾರ್ವಜನಿಕವಾಗಿ ಮೀನು ಹರಾಜು ಮತ್ತು ಚಿಲ್ಲರೆ ಮಾರಾಟ ಮಾಡದಂತೆ ನಾವು ನೋಡಿಕೊಳ್ಳುತ್ತೇವೆ. ಹೊರರಾಜ್ಯದ ಮೀನಿನ ಲಾರಿಗಳಿಗೆ ಬಂದರು ಪ್ರವೇಶಕ್ಕೆ ನಿರ್ಬಂಧ ಹಾಗೂ ನಿಯಮಾನುಸಾರವಾಗಿ ಮೀನುಗಾರಿಕೆ ಚಟುವಟಿಕೆ ನಡೆಸುವಂತೆ ನೋಡಿಕೊಳ್ಳುವ ಹೊಣೆ ಮೀನುಗಾರ ಸಂಘದ್ದು ಎಂದು ತಿಳಿಸಿದ್ದಾರೆ.
ಸರಕಾರದ ಎಲ್ಲಾ ಸೂಚನೆಗೆ ಅನುಸಾರವಾಗಿಯೇ ಬೋಟುಗಳನ್ನು ನೀರಿಗೆ ಇಳಿಸಲಾಗುವುದು. ಹಾಗೆಯೇ ಬೋಟುಗಳು ಕಡಲಿನಿಂದ ವಾಪಾಸ್ ಆದ ಬಳಿಕವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಗಾವಹಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ದೋಣಿಗಳು ಅಪಾಯದ ಸ್ಥಿತಿಯಲ್ಲಿದೆ ಎಂದು ಹೇಳಿದ ಮೀನುಗಾರಿಕೆ ಸಂಘದ ಉಪಾಧ್ಯಕ್ಷ ರಮೇಶ್ ಕೋಟ್ಯಾನ್ ಅವರು, ಮಲ್ಪೆಯಲ್ಲಿ ಲಾಕ್ಡೌನ್ ಕಾರಣದಿಂದಾಗಿ ಇಲ್ಲಿನ ದೋಣಿಗಳು ಮಾತ್ರವಲ್ಲದೇ ಗಂಗೊಳ್ಳಿ, ಹಂಗಾರಕಟ್ಟೆ ಕೋಡಿ, ಭಟ್ಕಳ, ಹೊರರಾಜ್ಯದ ಕೆಲವು ಬೋಟುಗಳು ನಿಂತಿದೆ. ಅಷ್ಟೇ ಅಲ್ಲದೇ ಜಾಗದ ಸಮಸ್ಯೆಯಿಂದಾಗಿ ದೋಣಿಗಳು ಹೊಳೆಯಲ್ಲೇ ತಂಗಿದೆ, ಇನ್ನು ಮಳೆಗಾಲ ಆರಂಭವಾದ್ದಲ್ಲಿ ನೀರಿನ ರಭಸಕ್ಕೆ ದೋಣಿಗಳು ನಿಯಂತ್ರಣ ತಪ್ಪಿ ಸಮುದ್ರ ಸೇರಬಹುದು. ಮೀನುಗಾರಿಕೆ ಅನುಮತಿ ನೀಡಿದ್ದಲ್ಲಿ ಬೋಟುಗಳು ತಮ್ಮ ತಮ್ಮ ಬಂದರಿಗೆ ತಲುಪುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.