ಮಂಗಳೂರು,ಮೇ 2 (Daijiworld News/MSP): ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ನಡುವೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗಿತ್ತು. ರಾಜ್ಯ ಸರ್ಕಾರ ಎಷ್ಟೇ ಒತ್ತಡ ಬಂದರೂ ಮದ್ಯದಂಗಡಿ ತೆರೆಯಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಮದ್ಯ ಪ್ರೀಯರಿಗೆ ಲಾಕ್ ಡೌನ್ ಕೊಂಚ ತೊಡಕಾಗಿ ಪರಿಣಮಿಸಿತ್ತು.
ಆದರೆ ಇದೀಗ ವೈನ್ ಶಾಪ್ ಗಳಿಗೆ ಬೀಗವಿದ್ರೂ ಒಳಗಿದ್ದ ಮದ್ಯ ಮಂಗಮಾಯಾವಾಗಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ವೈನ್ ಶಾಪ್ ಮಾಲಕರೇ ಈ ಅವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬಾರ್, ಮದ್ಯದಂಗಡಿಗಳ ಸಹಿತ ಎಲ್ಲ ಮದ್ಯ ಮಾರಾಟ ಸನ್ನದುಗಳನ್ನು ಬೀಗ ಮುದ್ರೆಗೊಳಿಸಿದ್ದರೂ ಮದ್ಯ ಮಾರಾಟ ಹಾಗೂ ಸಾಗಾಟ ಮಾಡಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಅಬಕಾರಿ ಆಯುಕ್ತರು ಜ್ಞಾಪನಾಪತ್ರನ್ನು ಹೊರಡಿಸಿದ್ದು, ಬಾರ್ ಮತ್ತು ವೈನ್ಶಾಪ್ ಸಹಿತ ಎಲ್ಲ ವಿಧದ ಮದ್ಯ ಮಾರಾಟ ಅಂಗಡಿಗಳಲ್ಲಿ (ಸನ್ನದುಗಳ) ಮದ್ಯ ದಾಸ್ತಾನುಗಳನ್ನು ತಪಾಸಣೆ ಮಾಡು ವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಹಿಂದೆ ಸನ್ನದುಗಳು ಈ ಹಿಂದೆ ಸೀಲ್ ಮಾಡಿರುವಂತೆಯೇ ಇರುವು ದನ್ನು ದೃಢಪಡಿಸಿಕೊಂಡು ಜಿಲ್ಲಾಧಿಕಾರಿಯವರ ಅನುಮತಿಯೊಂದಿಗೆ ಸನ್ನದುದಾರರ ಗಮನಕ್ಕೆ ತಂದು ಸನ್ನದಿನಲ್ಲಿರುವ ಮದ್ಯ, ಬಿಯರ್, ವೈನ್ ಇತ್ಯಾದಿಗಳ ಪ್ರಮಾಣದ ಇನ್ವೆಂಟ್ರಿಯನ್ನು ಸಿದ್ಧಪಡಿಸಿಕೊಂಡು ವ್ಯತ್ಯಾಸ ಕಂಡುಬಂದಲ್ಲಿ ವಿವರವಾದ ತನಿಖೆ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅವರು ಪತ್ರದಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಇದರನ್ವಯ ಜಿಲ್ಲಾಧಿಕಾರಿಯವರು ಆದೇಶವನ್ನು ಹೊರಡಿಸಿ ಲಾಕ್ಡೌನ್ ಮಾಡಿದ ಅವಧಿಯಲ್ಲಿ ಸೀಲ್ ಮಾಡಿರುವ ಎಲ್ಲ ವಿಧದ ಮದ್ಯ ಮಾರಾಟದ ಸನ್ನದುಗಳನ್ನು ಸನ್ನದುದಾರರ ಸಮಕ್ಷಮದಲ್ಲಿ ತೆರೆದು ವೀಡಿಯೋ ಚಿತ್ರೀಕರಣದೊಂದಿಗೆ ಮದ್ಯ, ಬಿಯರ್, ವೈನ್ ಇತ್ಯಾದಿ ಅಬಕಾರಿ ವಸ್ತುಗಳ ದಾಸ್ತಾನು ವಿವರ ತಯಾರಿಸಲು ಅನುಮತಿ ನೀಡಿದ್ದಾರೆ. ದಾಸ್ತಾನು ಲಾಕ್ಡೌನ್ ಪೂರ್ವದಲ್ಲಿದ್ದ ಪ್ರಮಾಣಕ್ಕಿಂತ ವ್ಯತ್ಯಾಸ ಕಂಡುಬಂದಲ್ಲಿ ಅಂತಹ ಸನ್ನದುಗಳ ವಿರುದ್ಧ ಕ್ರಮ ಜರಗಿಸುವಂತೆ ಸೂಚಿಸಿದ್ದಾರೆ.