ಸುಳ್ಯ, ಮಾ 12: ಸುಳ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದ್ದು ಸರಕಾರದ ಸಾಧನಾ ಯಾತ್ರೆ ಮತ್ತು ಗ್ರಾಮ ಸಮಾವೇಶಗಳ ಮೂಲಕ ಜನರ ಬಳಿಗೆ ತೆರಳುವುದಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ತಿಳಿಸಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು “ಕಾಂಗ್ರೆಸ್ ಪ್ರತೀ ಗ್ರಾಮಗಳಲ್ಲಿ ಗ್ರಾಮ ಸಮಾವೇಶ ನಡೆಸುತ್ತದೆ. ಯಾವುದಾದರೊಂದು ಮನೆಯ ಆತ್ಮೀಯ ವಾತಾವರಣದಲ್ಲಿ ಇದನ್ನು ನಡೆಸಲಾಗುವುದು. ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸರಕಾರದ ಸಾಧನಾ ಯಾತ್ರೆ 18ರ ತನಕ ನಡೆಯಲಿದ್ದು ಪ್ರತೀ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಎರಡು ದಿನ ಈ ಯಾತ್ರೆ ನಡೆಯಲಿದೆ. ರಾಜ್ಯ ಸರಕಾರದ ಸಾಧನೆಗಳನ್ನು ಇದರಲ್ಲಿ ಭಿತ್ತರಿಸಲಾಗುವುದು ಎಂದು ಹೇಳಿದರು.
ಮಾ.21ರಂದು ರಾಹುಲ್ ಗಾಂಧಿಯವರು ಮಂಗಳೂರಿಗೆ ಆಗಮಿಸಲಿದ್ದು ಸುಳ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಹೇಳಿದರು.
ಈ ಬಾರಿ ಬದಲಾವಣೆ ಕೊಡಿ ಎಂದು ನಾವು ಮತದಾರರಲ್ಲಿ ಕೇಳುತ್ತಿದ್ದೇವೆ. ಹೇಗೂ ಗೆಲ್ಲಬಹುದೆಂಬ ಭಾವನೆ ಬಂದು ಬಿಟ್ಟರೆ ಕ್ಷೇತ್ರದಲ್ಲಿ ಯಾವ ಕೆಲಸಗಳೂ ನಡೆಯುವುದಿಲ್ಲ. ಇದುವರೆಗೆ ಸುಳ್ಯದಲ್ಲಿ ಹಾಗಾಗಿದೆ. ಆದುದರಿಂದ ಈ ಬಾರಿ ಬದಲಾವಣೆ ತರಲು ಜನ ನಿರ್ಧರಿಸಿದ್ದಾರೆ. ನಮ್ಮ ನಾಯಕರೂ ಕೂಡಾ ಎಲ್ಲರೂ ಏಕ ಮನಸ್ಕರಾಗಿ ದೊಡ್ಡ ಮಟ್ಟದ ಹೋರಾಟ ರೂಪಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದ ಅವರು ಕೋಮುವಾದದಿಂದ ಗೆಲ್ಲಲು ಸಾಧ್ಯ ಇಲ್ಲ ಎಂದು ಬಿಜೆಪಿಯವರಿಗೆ ಮನವರಿಕೆಯಾಗಿದೆ. ಆದರೂ ಹಿಂದೂ ಮುಸ್ಲಿಂ ದ್ವೇಷ ತಂದಿಡಲು ಪ್ರಯತ್ನಿಸುತ್ತಲೇ ಇದ್ದಾರೆ. ಮೊನ್ನೆ ಮೊನ್ನೆ ಅವರ ಯಾತ್ರೆಯಲ್ಲಿ ಅಳವಡಿಸಲಾಗಿದ್ದ ಟ್ಯಾಬ್ಲೋವನ್ನು ಪೋಲೀಸರು ಸುಮೋಟೊ ವಶಕ್ಕೆ ತೆಗೆದುಕೊಂಡಿರುವುದು ಶ್ಲಾಘನೀಯ. ಸಂಜೆಯೊಳಗೆ ಟ್ಯಾಬ್ಲೊ ಬಿಡದಿದ್ದರೆ ಏನು ಮಾಡಬೇಕೆಂಬುದು ನಮಗೆ ಗೊತ್ತಿದೆ ಎಂದು ಸಂಸದ ಕಟೀಲ್ ಭಾಷಣ ಮಾಡಿದರು. ಆದರೆ ಏನೂ ಆಗಲಿಲ್ಲ. ಕಟೀಲ್ ಮಾತನಾಡುವುದು ಬೊಗಳೆ ಎಂದು ಎಲ್ಲರಿಗೂ ಗೊತ್ತಾಗಿದೆ ಎಂದು ಜಯಪ್ರಕಾಶ್ ರೈ ಹೇಳಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಕಾಮತ್ ಮಾತನಾಡಿ, “ಕೇಂದ್ರ ಸರಕಾರದ ವೈಫಲ್ಯಗಳನ್ನು ಮತ್ತು ರಾಜ್ಯ ಸರಕಾರದ ಸಾಧನೆಗಳನ್ನು ಜನರ ಮುಂದಿಡುವ ಮೂಲಕ ಕಾಂಗ್ರೆಸ್ ಚುನಾವಣೆ ಎದುರಿಸುತ್ತದೆ. ಕೇಂದ್ರ ಸರಕಾರದ ಬೆಲೆಯೇರಿಕೆ ನೀತಿ ಮತ್ತು ಕೃಷಿ ಬೆಳೆಗಳಿಗೆ ಬೆಲೆ ಇಲ್ಲದೇ ಇರುವುದು ಈ ಚುನಾವಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಸುಳ್ಯ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ರಾಜಾರಾಂ ಬೆಟ್ಟ ಮಾತನಾಡಿ, “ಒಂದು ಕಡೆ ಭಾಷಣ, ಘೋಷಣೆ ಮತ್ತು ಸುಳ್ಳಿನ ಭರವಸೆ. ಮತ್ತೊಂದು ಕಡೆ ರಾಜ್ಯ ಸರಕಾರದ ಸಾಧನೆ ಇವೆರಡರ ನಡುವೆ ಈ ಬಾರಿಯ ನಡೆಯುತ್ತದೆ. ಯಾವುದೇ ವೈಯಕ್ತಿಕ ಟೀಕೆಯಿಂದ ಚುನಾವಣೆ ಎದುರಿಸುವುದಿಲ್ಲ“ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ವೇದನಾಥ್ ಸುವರ್ಣ, ನಂದಕುಮಾರ್ ಮಡಿಕೇರಿ, ಕೆ.ಎಂ.ಮುಸ್ತಫ, ಅಶೋಕ್ ನೆಕ್ರಾಜೆ, ಶ್ರೀಹರಿ ಕುಕ್ಕುಡೇಲು, ಗೀತಾ ಕೋಲ್ಚಾರ್, ಶಶಿಕಲಾ ದೇರಪ್ಪಜ್ಜನಮನೆ, ಲೀಲಾ ಮನಮೋಹನ, ಪ್ರವೀಣ ಮರುವಂಜ, ಓವಿನ್ ಪಿಂಟೋ, ಲಕ್ಷ್ಮೀ ಸುಬ್ರಹ್ಮಣ್ಯ, ಶಶಿಕಲಾ ನೀರಬಿದಿರೆ, ಸಚಿನ್ ರಾಜ್ ಶೆಟ್ಟಿ, ಅನಿಲ್ ರೈ ಬೆಳ್ಳಾರೆ, ಕಂದಸ್ವಾಮಿ, ಸುಧೀರ್ ರೈ ಮೇನಾಲ, ಚಂದ್ರಲಿಂಗಂ, ಜಯಪ್ರಕಾಶ್ ನೆಕ್ರೆಪ್ಪಾಡಿ, ಮಹಮ್ಮದ್ ಕುಂಞಿ ಗೂನಡ್ಕ, ತಿರುಮಲೇಶ್ವರಿ, ಅನಸೂಯ ಬೆಳ್ಳಾರೆ, ಸಜಯಕೃಷ್ಣ, ದಿನೇಶ್ ಸರಸ್ವತಿಮಹಲ್, ಸನತ್ ಮುಳುಗಾಡು, ಶರೀಫ್ ಕಂಠಿ, ಪುರಷೋತ್ತಮ ನಂಗಾರು, ಶಾಫಿ ಕೆ ಮೊದಲಾದವರಿದ್ದರು.