ಮಂಗಳೂರು, ಮೇ 03 (Daijiworld News/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಲಾಕ್ಡೌನ್ನಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದ್ದು ನಾಳೆ ಬೆಳಿಗ್ಗೆ 7 ರಿಂದ ಇದು ಕಾರ್ಯಗತಕ್ಕೆ ಬರಲಿದೆ. ಈ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಂದ ಅಧಿಕೃತ ಮಾಹಿತಿ ಬಂದಿದ್ದು ನಾಳೆಯಿಂದ ಜಿಲ್ಲೆಯಲ್ಲಿ ಏನಿರುತ್ತೆ, ಏನಿರಲ್ಲ? ಎಂಬ ಮಾಹಿತಿ ಇಲ್ಲಿದೆ.
ನಾಳೆಯಿಂದ ಆಸ್ಪತ್ರೆಗಳ ಒಪಿಡಿಗಳು ಕಾರ್ಯಾಚರಣೆ ಮಾಡಲಿದ್ದು, ವೈದ್ಯಕೀಯ ಕ್ಲೀನಿಕ್ಗಳು, ಮೆಡಿಕಲ್ಗಳು ತೆರೆದಿರಲಿದೆ. ಕಂಟೆನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಆಟೋ ರಿಕ್ಷಾ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ಒಬ್ಬ ಚಾಲಕ, ಇಬ್ಬರು ಪ್ರಯಾಣಿಕರಿಗೆ ಅವಕಾಶವಿದೆ. ಟ್ಯಾಕ್ಸಿ, ಕ್ಯಾಬ್ಗಳ ಓಡಾಟಕ್ಕೂ ಅವಕಾಶ ನೀಡಲಾಗಿದ್ದು ಒಬ್ಬ ಚಾಲಕ, ಇಬ್ಬರು ಪ್ರಯಾಣಿಕ ಸಂಚಾರ ಮಾಡಬಹುದಾಗಿದೆ. ಇನ್ನು ಕಾರು ಮೊದಲಾದ ನಾಲ್ಕು ಚಕ್ರದ ವಾಹನಗಳಲ್ಲಿ ಇಬ್ಬರು ಮಾತ್ರ ತೆರಳಬಹುದಾಗಿದೆ. ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಮಾತ್ರವೇ ತೆರಳಬಹುದುದಾಗಿದೆ.
ಕಂಟೆನ್ಮಟ್ ಝೋನ್ ಹೊರತುಪಡಿಸಿ ಅವಕಾಶ ನೀಡಿದ ಕಾರ್ಯಗಳಿಗೆ ಖಾಸಗಿ ವಾಹನಗಳು ಜಿಲ್ಲೆಯಲ್ಲಿ ಸಂಚಾರ ಮಾಡಬಹುದಾಗಿದ್ದು ಹೊರ ಜಿಲ್ಲೆಗಳಿಗೆ ತೆರಳಬೇಕಾದ್ದಲ್ಲಿ ಪಾಸ್ ಹೊಂದಿರಬೇಕಾಗಿದೆ.
ಕಂಟೆನ್ಮೆಂಟ್ ಝೋನ್ ಹೊರತುಪಡಿಸಿ ಗ್ರಾಮೀಣ, ನಗರ ಭಾಗಗಳಲ್ಲಿ ಉತ್ಪಾದಕ ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದ್ದು, ಐಟಿ, ಹಾರ್ಡ್ವೇರ್ ತಯಾರಿ ಮಳಿಗೆಗಳು ತೆರೆಯ ಬಹುದಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಲಾಗಿದ್ದು ಎಲ್ಲಾ ಸಣ್ಣ ಪುಟ್ಟ ಅಂಗಡಿಗಳು ತೆರೆಯಬಹುದಾಗಿದೆ. ಇ-ಕಾಮಾರ್ಸ್ ಚಟುಚಟಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು ಖಾಸಗಿ ಸಂಸ್ಥೆಗಳಿಗೆ ಶೇ 33 ರಷ್ಟು ಸಿಬ್ಬಂದಿಗಳ ಬಳಸಿ ಕಾರ್ಯಾಚರಣೆ ನಡೆಸಬಹುದಾಗಿದೆ.
ಶಾಲಾ ಕಾಲೇಜುಗಳಿಗೆ, ಕೋಚಿಂಗ್ ಸೆಂಟರ್ಗಳಿಗೆ, ಸಿನಿಮಾ ಥಿಯೇಟರ್, ಮಾಲ್ಗಳಿಗೆ, ಜಿಮ್ಗಳಿಗೆ, ಬಾರ್, ಕ್ಲಬ್, ಪಬ್, ಮನರಂಜಾತ್ಮಕ ಪಾರ್ಕ್, ಸಭಾಂಗಣ, ಬಟ್ಟಯಂಗಡಿ, ಸ್ಪಾ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಧಾರ್ಮಿಕ ಸಮಾರಂಭ ನಡೆಸಲು ಅವಕಾಶ ಇರುವುದಿಲ್ಲ. ಸೆಲೂನ್, ಸ್ಪಾ, ಬಟ್ಟೆ ಅಂಗಡಿಗೆ ಅವಕಾಶವಿಲ್ಲ.
ಇನ್ನು ಎಲ್ಲಾ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ಗಳನ್ನು ಧರಿಸುವುದು ಕಡ್ಡಾಯವಾಗಿದ್ದು ನಿಯಮವನ್ನು ಉಲ್ಲಂಘನೆ ಮಾಡಿದ್ದಲ್ಲಿ ದಂಡನೀಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.