ವಿಶೇಷ ವರದಿ: ಅನುಷ್ ಪಂಡಿತ್
ಮಂಗಳೂರು, ಮಾ 12: ತುತ್ತು ಅನ್ನಕ್ಕಾಗಿ ಕೆಲಸ ಅರಸಿ ನಗರಕ್ಕೆ ಬಂದ ಅದೆಷ್ಟೋ ಜನರು ನಗರದ ದುಬಾರಿ ಜೀವನ ನಿರ್ವಹಣಾ ವೆಚ್ಚಕ್ಕೆ ಹೊಂದಿಕೊಳ್ಳಲಾಗದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಾರೆ. ಇಂತವರಿಗೆ ವರದಾನವಾಗಿದೆ ಇಂದಿರಾ ಕ್ಯಾಂಟೀನ್.
ನಗರದ ಪುರಭವನದ ಬಳಿಯಲ್ಲಿ ನೂತನವಾಗಿ ಆರಂಭಗೊಂಡ ಇಂದಿರಾ ಕ್ಯಾಂಟೀನ್ಗೆ ಉದ್ಘಾಟನೆಯಂದೇ ಉತ್ತಮ ಪ್ರಕ್ರಿಯೆ ದೊರೆತಿದ್ದು ಈಗಾಗಲೇ ಜನರು ಮುಗಿಬಿದ್ದು ಕೂಪನ್ ಪಡೆದು ಆಹಾರ ಸೇವಿಸುತ್ತಿದ್ದಾರೆ. ದಿನಪೂರ್ತಿಯ ಆಹಾರಕ್ಕೆ ಜೇಬಿನಲ್ಲಿ ಇಪ್ಪತೈದು ರೂಪಾಯಿ ಇದ್ದರೆ ಸಾಕು ಆತನ ಹೊಟ್ಟೆ ತುಂಬಿದಂತೆಯೇ ಸರಿ. ಬೆಳಗ್ಗಿನ ಉಪಹಾರಕ್ಕೆ 5 ರೂ ,ಹಾಗೂ ರಾತ್ರಿ, ಮದ್ಯಾಹ್ನದ ಊಟಕ್ಕೆ 10 ರೂ ನಿಗದಿಪಡಿಸಲಾಗಿದ್ದು , ಇದು ಬಡವರ ಪಾಲಿಗೆ ಅನ್ನದಾತನಾಗಿದೆ.
ಇಂದಿರಾ ಕ್ಯಾಂಟೀನ್ ನಲ್ಲಿ ಗ್ರಾಹಕರಿಗೆ ದಿನಂಪ್ರತಿ ಪ್ರತಿ ಪಾಳಿಯಲ್ಲಿ 500 ಮಂದಿಗೆ ಆಹಾರ ವಿತರಣೆಯ ಸೌಲಭ್ಯವಿದ್ದು, ಪ್ರತಿಯೊಬ್ಬರ ಆಹಾರಕ್ಕೆ ದಿನವೊಂದಕ್ಕೆ ತಗುಲುವ ವೆಚ್ಚ ರೂಪಾಯಿ 65 ರೂಪಾಯಿ. ಗ್ರಾಹಕರು 25 ರೂ.ಯಷ್ಟು ಪಾವತಿಸಿದರೆ, ಇನ್ನುಳಿದ 40 ರೂ ಹಣ ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಪಾವತಿಸುತ್ತಿದೆ. ಬೆಳಿಗ್ಗೆ 7 ರಿಂದ 8.30 ರವರೆಗೆ, ಮದ್ಯಾಹ್ನ 12.30 ರಿಂದ 2.00 ಗಂಟೆ, ರಾತ್ರಿ 7.00 ರಿಂದ 8.30 ವರೆಗೆ ಜನರಿಗೆ ಆಹಾರ ವಿತರಿಸಲು ತೆರೆದಿರುವ ಇಂದಿರಾ ಕ್ಯಾಂಟೀನ್ ನ ನಿಗದಿತ ಸಮಯವಲ್ಲದೇ ಬೇರೆ ಸಮಯದಲ್ಲಿ ಜನರು ಬರುತ್ತಿದ್ದು ಬಳಿಕ ಬೇಸರದಲ್ಲಿ ಹಿಂತಿರುಗುವ ದೃಶ್ಯ ಸಾಮಾನ್ಯ.
ಸದ್ಯದ ಪರಿಸ್ಥಿತಿಯಲ್ಲಿ ಒಂದು ಹೊತ್ತಿನಲ್ಲಿ 500 ಮಂದಿಗಷ್ಟೇ ಆಹಾರ ವಿತರಣೆ ನಡೆಯುತ್ತಿದ್ದು , 500 ಕೂಪನ್ಗಳು ಖಾಲಿಯಾದ ಮೇಲೂ 50 ರಿಂದ 100 ಜನರಿಗೆ ಆಗುವಷ್ಟು ಕೂಪನ್ ನೀಡಿ ಆಹಾರ ಪೂರೈಕೆ ಮಾಡುತ್ತಿರುವುದು ವಿಶೇಷ. ಈ ನಡುವೆ ಬಹುತೇಕ ಗ್ರಾಹಕರು ಕಾಫಿ-ಟೀ ಬೇಡಿಕೆಯೊಡುತ್ತಿದ್ದಾರೆ.
ಕ್ಯಾಂಟೀನ್ ಹೊರ ಭಾಗ ಹಾಗೂ ಒಳ ವಿನ್ಯಾಸವು ಉತ್ತಮವಾಗಿದ್ದು ,ಗ್ರಾಹಕರಿಗೆ ಕ್ಯಾಂಟೀನ್ ನೊಳಗೆ ನಿಂತು ಕೊಂಡು ಹೊರಗೆ ಕುಳಿತು ಕೊಂಡು ತಿನ್ನುವ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರು ,ಕೈ ತೊಳೆಯಲು ಶೌಚಲಯದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸುತ್ತ ಮುತ್ತಲೂ ಶುಚಿತ್ವ ಕಾಪಾಡಲು ವ್ಯವಸ್ಥೆ ಮಾಡಲಾಗಿದೆ.
ಪ್ರತಿ ದಿನದಲ್ಲಿ 500 ಜನರಿಗೆ ಮಾತ್ರ ಊಟವನ್ನು ಪೂರೈಕೆ ಮಾಡುತ್ತಿದೆ.ಸುತ್ತಮುತ್ತ ಆಸ್ಪತ್ರೆಗಳಿರುದರಿಂದ ರೋಗಿಗಳ ಜೊತೆಗಿರುವವರು ಇಲ್ಲಿಗೆ ಬರುತ್ತಾರೆ.ಪಾರ್ಸೆಲ್ ವ್ಯವಸ್ಥೆ ಮಾಡಬೇಕು.ಹಾಗೂ 500 ಜನರಿಗೆ ಮಾತ್ರ ನೀಡುತ್ತಿದ್ದಾರೆ.1000ಜನರಿಗೆ ಊಟ ಪೂರೈಕೆ ಮಾಡಿದರೆ.ಉತ್ತಮ ಎನ್ನುತ್ತಾರೆ ಸ್ಥಳೀಯ ಉದ್ಯೋಗಿಯಾದ ಸಂಗೀತ.
ಇಲ್ಲಿನ ಜನರು ಕುಚ್ಚಲಕ್ಕಿಯ ಅನ್ನ ಸೇವಿಸುವುದರಿಂದ , ಬೆಳ್ತಿಗೆ ಅಕ್ಕಿ ಸೇವಿಸಲು ಸ್ವಲ್ಪ ಕಷ್ಟವಾಗುತ್ತಿದೆ.ಅದರಿಂದ ಆದಷ್ಟು ಕುಚ್ಚಲಕ್ಕಿಯ ಅನ್ನ ವ್ಯವಸ್ಥೆ ಮಾಡಿದರೇ ಒಳ್ಳೆಯದು. -ರಾಜೇಶ್, ಸ್ಥಳೀಯ