ಕಾರ್ಕಳ, ಮೇ 03 (DaijiworldNews/SM): ಕಾರ್ಕಳದಲ್ಲಿ ಸುರಿದ ಭಾರೀ ಬಿರುಗಾಳಿ ಮಳೆಗೆ ನಗರದ ಕೆಲವೆಡೆಗಳಲ್ಲಿ ಹಾನಿ ಉಂಟಾಗಿದೆ. ರವಿವಾರ ಸಂಜೆ 5 ಗಂಟೆ ಸುಮಾರಿಗೆ ಬೀಸಿದ ಗಾಳಿ ಮಳೆಗೆ ಕುಂಟಲ್ಪಾಡಿ ಅತ್ರಿಯಾ ಅಪಾರ್ಟ್ಮೆಂಟ್ ಮೇಲ್ಪಾವಣಿಗೆ ಅಳವಡಿಸಿದ ಶೀಟ್ ಸುಮಾರು 200 ಮೀಟರ್ ಸುತ್ತುಮುತ್ತು ಹಾರಿ ಹೋಗಿದೆ. ಇದರಿಂದ 5 ಮನೆಗಳು ಹಾನಿಗೀಡಾಗಿವೆ.
ಗಾಳಿಯ ಅಬ್ಬರಕ್ಕೆ ಇದೇ ಪರಿಸರದ 7 ವಿದ್ಯುತ್ ಕಂಬಗಳು ಹಾನಿಗೀಡಾಗಿದೆ. ಎಪಿಎಂಸಿ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ಪರನೀರು, ಬಾಲಾಜಿ ಶಿಬಿರ ಬಳಿ ಮನೆಗಳು ಹಾನಿಗೀಡಾಗಿದೆ. ನಗರದ ಸದಾನಂದ ಕಾಮತ್ ರಸ್ತೆಯಲ್ಲಿ ತೆಂಗಿನ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು, ತಂತಿ ತುಂಡಾಗಿದೆ.
ಗ್ರಾಮೀಣ ಪ್ರದೇಶದ ಗುರುಬೆಟ್ಟು, ಚಿಕ್ಕಬೆಟ್ಟು, ಮುರತ್ತಂಗಡಿ ಭಾಗಗಳಲ್ಲೂ ಭಾರಿ ಗಾಳಿ ಬೀಸಿದ್ದು ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಸಂಜೆ ವೇಳೆಗೆ ಗಾಳಿಯ ಅಬ್ಬರದ ನುಡವೆ ಮಳೆ ಆರಂಭಿಸಿದ್ದು, ಸಿಡಿಲು, ಗುಡುಗಿನ ಅರ್ಭಟ ಕಂಡುಬಂದಿದೆ.