ಮಂಗಳೂರು, ಮೇ 03 (DaijiworldNews/SM): ದೇಶದಲ್ಲೆಡೆ ಮೂರನೇ ಬಾರಿ ಲಾಕ್ ಡೌನ್ ಅವಧಿ ವಿಸ್ತರಣೆಯಾಗಿದೆ. ಆದರೆ, ಕೊರೊನಾ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ನಿಯಮಗಳನ್ನು ಒಂದಿಷ್ಟು ಸಡಿಲಿಕೆ ಮಾಡಲಾಗಿದೆ. ಆದರೆ, ಜನರು ನಿಯಮಗಳನ್ನು ಚಾಚು ತಪ್ಪದೆ ಪಾಲಿಸುವುದು ಅಗತ್ಯವಾಗಿದ್ದು, ತಪ್ಪಿದ್ದಲ್ಲಿ ಮತ್ತೆ ಲಾಕ್ ಆಗೋದ್ರಲ್ಲಿ ಯಾವುದೇ ಸಂಶಯವಿಲ್ಲ.
ದ.ಕ. ಜಿಲ್ಲೆ ಸೇರಿದಂತೆ ಹಲವು ಕಡೆಗಳಲ್ಲಿ ಜನರ ಅನುಕೂಲಕ್ಕಾಗಿ ಕೆಲವು ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಬೆಳಗ್ಗೆ 7ರಿಂದ ಸಂಜೆ 7 ಗಂಟೆಯ ತನಕ ಜನರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ತೆರೆಯುವುದು, ವ್ಯಾಪಾರ ವ್ಯವಹಾರ ನಡೆಸುವುದು, ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವುದು, ವೈನ್ ಶಾಪ್ ಗಳನ್ನು ತೆರೆಯುವುದು ಇತ್ಯಾದಿಗಳಿಗೆ ವಿನಾಯಿತಿ ನೀಡಲಾಗಿದೆ.
ಸಂಕಷ್ಟಕ್ಕೀಡಾದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಆದರೆ, ಅದರೊಂದಿಗೆ ನಿಬಂಧನೆಗಳನ್ನು ಕೂಡ ನೀಡಿದೆ. ಈ ನಿಬಂಧನೆ, ನಿಯಮ, ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯ ಜನಸಾಮಾನ್ಯರಲ್ಲಿದೆ. ಒಂದೊಮ್ಮೆ ಜನರು ನಿಯಮಗಳನ್ನು ಪಾಲಿಸುವಲ್ಲಿ ವಿಫಲರಾದಲ್ಲಿ ಮತ್ತೆ ಜಿಲ್ಲಾಡಳಿತ ತನ್ನ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಿದೆ. ಸೋಮವಾರದಿಂದಲೇ ಜಿಲ್ಲಾಡಳಿತ ಎಲ್ಲಾ ಆಗುಹೋಗುಗಳ ಬಗ್ಗೆ ಎಚ್ಚರ ವಹಿಸಲಿದೆ. ಜನರು ಎಷ್ಟರ ಮಟ್ಟಿಗೆ ನಿಯಮಗಳನ್ನು ಪಾಲಿಸುತ್ತಾರೆ ಎಂಬುವುದನ್ನು ಅಧಿಕಾರಿಗಳು ಗಮನಿಸಲಿದ್ದಾರೆ.
ಸಾರ್ವಜನಿಕರು ಕಡ್ಡಾಯವಾಗಿ ಏನು ಮಾಡಬೇಕು? ಏನು ಮಾಡಬಾರದು?
ಸಾರ್ವಜನಿಕ ಪ್ರದೇಶಕ್ಕೆ ಬರುವ ಸಂದರ್ಭ ಮಾಸ್ಕ್ ಕಡ್ಡಾಯ
ಅನಗತ್ಯವಾಗಿ ಸಾರ್ವಜನಿಕ ಪ್ರದೇಶಕ್ಕೆ ತೆರಳಬಾರದು
ಸಾಮಾಜಿಕ ಅಂತರಕ್ಕೆ ಪ್ರಥಮ ಆದ್ಯತೆ
ಅವಶ್ಯಕವಿದ್ದವರಿಗೆ ಮಾತ್ರ ಮನೆಯಿಂದ ಹೊರಬರುವುದು
ವಾಹನ ಸಂಚಾರ ಅಗತ್ಯವಿದ್ದಲ್ಲಿ ಮಾತ್ರ ಬಳಸಿ
ಯುವಕರು ಅನಗತ್ಯ ಬೈಕ್ ನಲ್ಲಿ ಸುತ್ತಾಡದಿರಿ
ಬೈಕ್ ಗಳಲ್ಲಿ ಇಬ್ಬರು ಪ್ರಯಾಣಿಸದಿರಿ
ಒಬ್ಬರು ಮಾತ್ರವೇ ಬೈಕ್ ನಲ್ಲಿ ಸಂಚರಿಸಿ
ಕಾರಿನಲ್ಲಿ ಚಾಲಕ ಸಹಿತ ಮೂವರೇ ಪ್ರಯಾಣಿಸಿ
ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳದಿರಿ
ಸಾಮಾಗ್ರಿಗಳ ಖರೀದಿಗೆ ಮುಗಿಬೀಳದಿರಿ