ಮಂಗಳೂರು,ಮಾ 12: 2009ರ ಜ.24 ರಂದು ರಾತ್ರಿ ನಡೆದ ಅಮ್ನೇಶಿಯ ಪಬ್ ದಾಳಿ ಪ್ರಕರಣದ ತೀರ್ಪು ಹೊರಬಿದ್ದಿದೆ. ದಾಳಿಯಲ್ಲಿ ಭಾಗಿಯಾಗಿದ್ದರೂ ಎನ್ನಲಾದ ಎಲ್ಲಾ 26 ಆರೋಪಿಗಳನ್ನು ಮೂರನೇ ಜೆಎಂಎಫ್ಸಿ ಕೋರ್ಟ್ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ. ಪ್ರಕರಣದಲ್ಲಿ ಸಾಕ್ಷ್ಯಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಮಂಜುನಾಥ್ ಅವರು ತೀರ್ಪು ನೀಡಿದರು. ಆರೋಪಿಗಳ ಪರ ವಕೀಲರಾದ ಆಶಾ ನಾಯಕ್ ಮತ್ತು ವಿನೋದ್ ಕುಮಾರ್ ಮಂಡಿಸಿದ್ದರು. ತೀರ್ಪು ಪ್ರಕಟಣೆಯ ವೇಳೆ ಖುದ್ದು ಹಾಜರಿದ್ದ ತೀರ್ಪು ಆಲಿಸಿದ ಬಳಿಕ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್ ಮುತಾಲಿಕ್ ಇದು ಸತ್ಯಕ್ಕೆ ಸಂದ ಜಯ ಎಂದು ಹೇಳಿದರು.
ಘಟನೆಯ ವಿವರ :
2009ರ ಜ.24 ರಂದು ಸಂಜೆ ನಗರದ ಬಲ್ಮಠ ರಸ್ತೆಯಲ್ಲಿರುವ ಅಮ್ನೇಶಿಯ ಪಬ್ಗೆ ದಾಳಿ ನಡೆಸಿ ಪಾರ್ಟಿ ನಡೆಸುತ್ತಿದ್ದ ಯುವಕ, ಯುವತಿಯರಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಈ ಬಗ್ಗೆ ಮುತಾಲಿಕ್ ಸೇರಿದಂತೆ 40ಕ್ಕೂ ಹೆಚ್ಚು ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು.