ಮಂಗಳೂರು, ಮೇ 04 (Daijiworld News/MSP): ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಮತ್ತೆರಡು ಪ್ರದೇಶದಲ್ಲಿ ವಿಧಿಸಲಾಗಿದ್ದ ಸೀಲ್ ಡೌನ್ ತೆರವುಗೊಳಿಸಲಾಗಿದೆ. ಸಂಪ್ಯ ಮತ್ತು ತುಂಬೆಯಲ್ಲಿ ಕೊರೊನಾ ಪಾಸಿಟಿವ್ ಸೋಂಕಿತರು ಕಂಡುಬಂದ ಹಿನ್ನಲೆಯಲ್ಲಿ ಈ ಪ್ರದೇಶವನ್ನು ನಿರ್ಬಂಧಿತ ವಲಯವಾಗಿ ಘೋಷಿಸಲಾಗಿತ್ತು.
ಬಂಟ್ವಾಳದ ತುಂಬೆಯ ರೋಗಿ ಸಂಖ್ಯೆ 146 ಮತ್ತು ಸಂಪ್ಯದ ರೋಗಿ ಸಂಖ್ಯೆ 106 ಗುಣಮುಖರಾಗಿದ್ದು ಇವರ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ 28 ದಿನಗಳು ಕಳೆದಿದ್ದು ಸಂಪರ್ಕದಲ್ಲಿದ್ದವರ ಎಲ್ಲರ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಎರಡು ಪ್ರದೇಶಗಳನ್ನು ಸೀಲ್ ಡೌನ್ ಮುಕ್ತಗೊಳಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶಿಸಿದ್ದಾರೆ.
ಇದಕ್ಕೂ ಹಿಂದೆ ಜಿಲ್ಲಾಧಿಕಾರಿಯವರು ಬಂಟ್ವಾಳ ತಾಲೂಕಿನ ಸಜಿಪನಡು, ಬೆಳ್ತಂಡಿ ತಾಲೂಕಿನ ಕರಾಯ ಮತ್ತು ಸುಳ್ಯದ ಅಜ್ಜಾವರ ಸೀಲ್ ಡೌನ್ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದರು