ಉಡುಪಿ, ಮೇ 04 (DaijiworldNews/PY) : ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಸರ್ಕಾರ ಇಂದಿನಿಂದ ಅವಕಾಶ ನೀಡಿದೆ. ಆದರೆ ಉಡುಪಿಯ ಮಹಿಳೆಯೋರ್ವರು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಕಾಪು ತಾಲೂಕಿನ ಕಟಪಾಡಿಯ ಮಹಿಳೆ ಸುಮಲತಾ ಕಾಮತ್ ಅವರು ಸರ್ಕಾರ ಹಾಗೂ ಸಿಎಂ ಬಿಎಸ್ವೈ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರ್ಕಾರವನ್ನು ಪ್ರಶ್ನಿಸಿದ ಮಹಿಳೆ, ನಾವು ದುಡಿದು ಸಂಪಾದನೆ ಮಾಡುತ್ತೇವೆ ಎಂದರೆ ಹೊಟೇಲ್ ತೆರೆಯಲು ಅವಕಾಶ ನೀಡುವುದಿಲ್ಲ. ಆದರೆ, ಬಾರ್ಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ನಿಮಗೆ ಏನೂ ಅನಿಸುವುದಿಲ್ಲವೇ? ನಿಮಗೆ ನೈತಿಕತೆ ಇದೆಯೇ? ದುಡ್ಡು ಬರುತ್ತದೆ ಎಂದು ಸರ್ಕಾರ ಇಂತಹ ಕೆಲಸವನ್ನು ಮಾಡಬೇಕಿತ್ತಾ ಎಂದು ಕೇಳಿದ್ದಾರೆ.
ಸರ್ಕಾರದ ನಡೆಯನ್ನು ಮಾತ್ರವಲ್ಲದೇ, ಜನರ ನಡೆಯನ್ನೂ ಖಂಡಿಸಿದ್ದು, ಇಷ್ಟು ದಿನ ಊಟಕ್ಕೆ ಇಲ್ಲದ ಹಣ ಮದ್ಯ ಖರೀದಿ ಮಾಡಲು ಎಲ್ಲಿಂದ ಬಂತು? ನಿನ್ನೆಯವರೆಗೆ ಉಚಿತ ಊಟಕ್ಕೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದವರು ಇವತ್ತು ವೈನ್ ಶಾಪ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ನಿನ್ನೆ ಇಲ್ಲದ ದುಡ್ಡು ಇಂದು ಎಲ್ಲಿಂದ ಬಂತು? ಎಂದು ಪ್ರಶ್ನೆ ಮಾಡಿದ್ದಾರೆ.
ಊಟಕ್ಕೆ ಹಣ ಇಲ್ಲ ಎಂದು ಕುಳಿತಿದ್ದ ಜನರು ಈಗ ಮದ್ಯಕ್ಕೆ ಹಣ ಸೇರಿಸಿ ಮುಗಿಬಿದ್ದ ಕುಡುಕರಿಗೆ ನೀವು ಯಾಕೆ ದಿನಸಿ ಕೊಟ್ಟಿದ್ದೀರಿ. ನೀವು ಅಕ್ಕಿ, ಹಣ್ಣು, ಹಂಪಲು ಎಲ್ಲವನ್ನು ಇಂತವರಿಗೆ ಕೊಟ್ಟಿದ್ದೀರಿ. ಇವರೆಲ್ಲಾ ಕೆಲಸಕ್ಕೆ ಹೋಗುತ್ತಾರಾ? ಈ ಪರಿಸ್ಥಿತಿಯಲ್ಲಿ ಸರ್ಕಾರ ಮದ್ಯದಂಗಡಿ ತೆರೆದಿದೆ. ಐನೂರು ರೂಪಾಯಿ ಕೊಟ್ಟು ಎಲ್ಲರೂ ಕುಡಿಯಲು ಹೋಗುತ್ತಿದ್ದಾರೆ. ಅಲ್ಲದೇ ಹೆಂಡತಿ, ಮಕ್ಕಳನ್ನೂ ಬೀದಿಗೆ ನೂಕುತ್ತಿದ್ದಾರೆ. ಸರ್ಕಾರಕ್ಕೆ ಬುದ್ದಿ ಇಲ್ಲವೇ? ಹಣ ಬರುತ್ತದೆ ಎಂದು ಇಂತಹ ಕಾರ್ಯ ಮಾಡಬಹುದೇ? ಎಂದು ಕೇಳಿದ್ದಾರೆ.
ಒಂದು ಹೊತ್ತಿನ ಊಟಕ್ಕೆ ಗತಿ ಇಲ್ಲ ಎಂದವರು ಇದೀಗ ಐನೂರು ರೂಪಾಯಿ ಕೊಟ್ಟು ಮದ್ಯ ಖರೀದಿ ಮಾಡುತ್ತಿದ್ದಾರೆ. ಒಳ್ಳೆಯ ಕಾರ್ಯ ಮಾಡುವವರಿಗೆ ನೀವು ನೆರವಾಗುವುದಿಲ್ಲ. ಕುಡಿಯಲು ಬಿಟ್ಟು ನೀವು ಯಾರನ್ನು ನಾಶ ಮಾಡಲು ಮುಂದಾಗಿದ್ದೀರಿ? ನೀವು ಕೊರೊನಾ ನಾಶ ಮಾಡುತ್ತಿಲ್ಲ. ಬದಲಾಗಿ, ದೇಶವನ್ನು ನಾಶ ಮಾಡಲು ಹೊರಟಿದ್ದೀರಿ ಎಂದರು.