ಬೆಳ್ತಂಗಡಿ, ಮೇ 04 (DaijiworldNews/PY) : ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೆ ಅಂತರ್ ಜಿಲ್ಲಾ ಪ್ರವೇಶ ಮಾಡುವವರಿಗೆ ದ.ಕ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಚಾರ್ಮಾಡಿ ಚೆಕ್ ಪೋಸ್ಟ್ನಲ್ಲಿ ಚಿಕ್ಕಮಗಳೂರು ಹಾಗೂ ಇನ್ನಿತರ ಜಿಲ್ಲೆಗಳಿಂದ ದ.ಕ ಜಿಲ್ಲೆಗೆ ಪ್ರವೇಶಿಸಲು ಇರುವ ಚಾರ್ಮಾಡಿ ಚೆಕ್ ಪೋಸ್ಟ್ನಲ್ಲಿ ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ, ಕಂದಾಯ ಇಲಾಖೆ ದಿನದ 24 ಗಂಟೆ ಬಿಗು ತಪಾಸಣೆಗೆ ಮುಂದಾಗಿದೆ.
ತರಕಾರಿ ಸಾಗಾಟ ವಾಹನಕ್ಕೆ ಮುಕ್ತ ಅವಕಾಶ ಇದುವರೆಗೆ ಇದ್ದು ,ವೈದ್ಯಕೀಯ ಅಗತ್ಯಕ್ಕೆ ಸಮರ್ಪಕ ದಾಖಲೆಗಳ ಆಧಾರದಂತೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಪ್ರತಿಯೊಬ್ಬರ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಲ್ಲದೆ ಹೊರ ಜಿಲ್ಲೆಯಿಂದ ದ.ಕ ಜಿಲ್ಲೆಗೆ ಉಳಿದು ಕೊಳ್ಳಲು ಬರುವವರಿಗೆ ಸೀಲ್ ಹಾಕಿ ಕಡ್ಡಾಯ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ. ಜೊತೆಗೆ ಆರೋಗ್ಯ ಇಲಾಖಾ ಸಿಬ್ಬಂದಿಗಳು ಅರೋಗ್ಯ ತಪಾಸಣೆ ಮಾಡುತ್ತಿದ್ದು ಅಧಿಕ ಜ್ವರದ ಲಕ್ಷಣ ಕಂಡುಬಂದರೆ ತಕ್ಷಣ 108 ವಾಹನದ ಮೂಲಕ ಕ್ವಾರಂಟೈನ್ಗೆ ನಿಗದಿಗೊಳಿಸಿದ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಚಾಲಕರನ್ನು ಅವರೊಂದಿಗಿರುವ ಸಹ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಖಾಸಗಿ ಪ್ರಯಾಣಿಕರ ದಾಖಲೆ ಪರಿಶೀಲಿಸಿ ಬಳಿಕ ಅರೋಗ್ಯ ತಪಾಸಣೆ ಮಾಡಲಾಗುತ್ತಿದೆ. ದಿನದ 24 ಗಂಟೆ ಕಾರ್ಯಾಚರಣೆ ಇರುವುದರಿಂದ ಸಿಬ್ಬಂದಿಗಳಿಗೆ ಮೂರು ಹೊತ್ತಿನ ವಿಭಾಗ ಮಾಡಲಾಗಿದೆ. ಆರೋಗ್ಯ ಇಲಾಖೆಯ ಎರಡು ಸಿಬ್ಬಂದಿಗಳು, ಸಂಚಾರಿ ಠಾಣಾ ಎಸ್.ಐ ಸಹಿತ ಸಿಬ್ಬಂದಿಗಳು, ಧರ್ಮಸ್ಥಳ ಠಾಣಾ ಸಿಬ್ಬಂದಿಗಳು, ಕಂದಾಯ ಇಲಾಖಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಒಟ್ಟಿನಲ್ಲಿ ಲಾಕ್ ಡೌನ್ ಸಡಿಲಿಕೆಯಾದರು ಚೆಕ್ ಪೋಸ್ಟ್ ಬಿಗು ತಪಾಸಣೆ ಜಿಲ್ಲಾಡಳಿತದ ಕಾರ್ಯ ಮೆಚ್ಚುಗೆಯಾಗಿದೆ.