ಕಾಸರಗೋಡು, ಮೇ 04 (DaijiworldNews/SM): ಜಿಲ್ಲೆಯು ಕೊರೊನಾ ವೈರಸ್ ಮುಕ್ತಗೊಳ್ಳುವ ಹಂತದಲ್ಲಿದೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಕೇವಲ ಮೂರು ಮಂದಿ ಮಾತ್ರ.
178 ಸೋಂಕಿತರಲ್ಲಿ 175 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದು, ಜಿಲ್ಲೆಯ ಜನತೆಯಲ್ಲಿ ಆಶಾಭಾವವನ್ನು ಮೂಡಿಸಿದೆ. ಮಾರ್ಚ್ 17ರಿಂದ ಏಪ್ರಿಲ್ ಮೂರನೇ ವಾರದ ತನಕ ಜಿಲ್ಲೆಯಲ್ಲಿ ವೈರಸ್ ಆತಂಕ ಉಂಟು ಮಾಡಿತ್ತು. ಆರಂಭದ ದಿನಗಳಲ್ಲಿ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚಳವಾಗುತ್ತಿತ್ತು. ಆದರೆ, ಕಳೆದ ಎರಡು ವಾರಗಳಿಂದ ರೋಗ ಮುಕ್ತಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.
ಇನ್ನು ಕಾಸರಗೋಡಿನಲ್ಲಿ ದಾಖಲಾಗುತ್ತಿದ್ದ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಾ ಬಂದಿದೆ. ಕಳೆದ ನಾಲ್ಕು ದಿನಗಳಿಂದ ಪಾಸಿಟಿವ್ ಪ್ರಕರಣಗಳೇ ದೃಢಪಟ್ಟಿಲ್ಲ. ಚೆಂಗಳ ಎರಡು, ಚೆಮ್ನಾಡ್ ಗ್ರಾಮ ಪಂಚಾಯತ್ ನಲ್ಲಿ ಒಬ್ಬರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ಜಿಲ್ಲೆಯ ಜನತೆಯಲ್ಲಿ ಒಂದಿಷ್ಟು ಭರವಸೆ ಮೂಡಿದಂತಾಗಿದೆ. ಮತ್ತೊಂದೆಡೆ ಅತ್ಯಧಿಕ ಸಂಖ್ಯೆಯಲ್ಲಿ ಸೋಂಕಿತರನ್ನು ಕಂಡಿದ್ದ ಜಿಲ್ಲೆ ಸಂಪೂರ್ಣ ಗುಣಮುಖವಾಗುತ್ತ ಮುಖಮಾಡುವ ಮೂಲಕ ದೇಶಕ್ಕೆ ಮಾದರಿಯಾದಂತಾಗಿದೆ.