ಮಂಗಳೂರು, ಮೇ 5 (Daijiworld News/MSP): ನಗರದ ಹೃದಯಭಾಗದಲ್ಲಿ ಮೇ 5 ರ ಮಂಗಳವಾರ ಎರಡು ಕಾಡುಕೋಣಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯರು ನಗರದಲ್ಲಿ ರಾಜರೋಷವಾಗಿ ಸುತ್ತಾಡುತ್ತಿರುವ ಕಾಡುಕೋಣ ನೋಡಿ ಗಾಬರಿಯಾಗಿದ್ದಾರೆ.
ಬಿಜೈ ಕಾಪಿಕಾಡ್ ನ ಹ್ಯಾಟ್ ಹಿಲ್ ಬಳಿ ಹಾಗೂ ಮಣ್ಣಗುಡ್ಡೆಯ ವೇರ್ ಹೌಸ್ ಬಳಿ ಕಾಡುಕೋಣ ಪ್ರತ್ಯಕ್ಷವಾಗಿದೆ. ಇನ್ನು ಜನನಿಭಿಡ ಪ್ರದೇಶದಲ್ಲಿ ಹೀಗೆ ಒಂಟಿ ಕಾಡುಕೋಣಗಳು ಪ್ರತ್ಯಕ್ಷವಾದ ಪರಿಣಾಮ ಸ್ಥಳೀಯರು ಭಯಭೀತರಾಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಸುದ್ದಿ ಸಿಗುತ್ತಿದ್ದಂತೆ ಅರಣ್ಯ ಇಲಾಖೆಗೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಸ್ಥಳಕ್ಕೆ ಅಗಮಿಸಿದ ಅರಣ್ಯ ಇಲಾಖೆಯ ತಂಡ ಕಾಡುಕೋಣ ಹಿಡಿಯುವ ಕಾರ್ಯಾಚಣೆಗೆ ಮುಂದಾಗಿದ್ದಾರೆ.
ಬಜ್ಪೆ, ಅದ್ಯಪಾಡಿ ಅರಣ್ಯ ಪ್ರದೇಶದ ಸುತ್ತಮುತ್ತ ಕಾಡುಕೋಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅಲ್ಲಿಂದ ಬಂದಿರುವ ಸಾಧ್ಯತೆ ಇರಬಹುದೆಂದು ಅರಣ್ಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದು, ಲಾಕ್ ಡೌನ್ ನಿಂದ ಜನ ಸಂಚಾರವಿಲ್ಲದ ಕಾರಣ ಕಾಡುಕೋಣಗಳು ತಪ್ಪಿ ನಗರ ಪ್ರವೇಶಿಸಿರಬಹುದು ಎಂದು ಹೇಳಿದ್ದಾರೆ.