ಮಂಗಳೂರು, ಮೇ 5 (Daijiworld News/MSP): ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಸಿದ್ಧತೆಗಳು ನಡೆಯುತ್ತಿರುವುದರಿಂದ ಮಂಗಳೂರಿನ ಹೋಟೆಲ್ ವಸತಿಗೃಹ ಸಂಸ್ಥೆಗಳೊಂದಿಗೆ ಜಿಲ್ಲಾಡಳಿತ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿತು.
ಸಾಂದರ್ಭಿಕ ಚಿತ್ರ
ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಗಳಿಂದ ಪ್ರಯಾಣಿಕರುಆಗಮಿಸಲಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾರ್ಗದರ್ಶಿಯಂತೆ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲಾಗುತ್ತಿದೆ ಎಂದು ಹೇಳಿದರು.
ವಿದೇಶದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ವಿಮಾನನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಗಂಟಲ ದ್ರವ ಮಾದರಿ ಸಂಗ್ರಹಿಸಲಾಗುವುದು. ಬಳಿಕ ಅವರನ್ನು ನಿಗಾವಣೆ ಕೇಂದ್ರಗಳಿಗೆ ಕಳುಹಿಸಲಾಗುವುದು. ಇದಕ್ಕಾಗಿ ನಗರದ ವಿವಿಧ ವಸತಿ ಗೃಹಗಳನ್ನು ಕ್ವಾರೆಂಟೈನ್ ಕೇಂದ್ರಗಳನ್ನಾಗಿ ಗುರುತಿಸಲಾಗುವುದು. ಪ್ರತಿ ಕೇಂದ್ರಕ್ಕೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಅವರು ಹೇಳಿದರು. ವಸತಿಗೃಹದ ವೆಚ್ಚವನ್ನು ವಿದೇಶದಿಂದ ಬಂದ ಪ್ರಯಾಣಿಕರೇ ಭರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಆರೋಗ್ಯ ಸಚಿವಾಲಯದ ಎಲ್ಲಾ ಮಾರ್ಗದರ್ಶಿಗಳನ್ನು ವಸತಿಗೃಹಗಳು ಪಾಲಿಸಬೇಕು ಎಂದುಅವರು ತಿಳಿಸಿದರು. ವಸತಿಗೃಹಗಳಿಗೆ ಸಮಾನವಾದ ಶಿಷ್ಟಾಚಾರಗಳನ್ನು ಶೀಘ್ರವೇ ನಿಗದಿಪಡಿಸಲಾಗುವುದು ಎಂದು ರಾಹುಲ್ ಶಿಂಧೆ ತಿಳಿಸಿದರು. ಸಭೆಯಲ್ಲಿ ಮಹಾನಗರಪಾಲಿಕೆ ಪರಿಸರ ಅಭಿಯಂತರ ಮಧು, ನಗರದ ವಿವಿಧ ಲಾಡ್ಜ್ ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.